ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿದ 11 ಮಕ್ಕಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ದೇಶಾದ್ಯಂತ ಆತಂಕ ಸೃಷ್ಟಿಸಿದೆ.
ಮಧ್ಯಪ್ರದೇಶದ ಛಿಂದ್‌ವಾರಾ ಜಿಲ್ಲೆಯಲ್ಲಿ 9 ಮಕ್ಕಳು ಮತ್ತು ರಾಜಸ್ಥಾನದ ಭರತ್ ಹಾಗೂ ಸಿಕರ್‌ನಲ್ಲಿ 2 ಮಕ್ಕಳು ಸೇರಿ ಒಟ್ಟು 11 ಕಂದಮ್ಮಗಳು ಸಾವನ್ನಪ್ಪಿದ್ದಾರೆ.
ಈ ಘಟನೆಗಳ ಬೆನ್ನಲ್ಲೇ ರಾಜಸ್ಥಾನ ಸರ್ಕಾರವು ಕೇಸನ್ಸ್ ಫಾರ್ಮಾ ಕಂಪನಿಯ 19 ಔಷಧಿಗಳ ಮಾರಾಟ ಮತ್ತು ವಿತರಣೆಯನ್ನು ಸ್ಥಗಿತಗೊಳಿಸಿದೆ. ಅಲ್ಲದೆ, ರಾಜಸ್ಥಾನದ ಔಷಧ ನಿಯಂತ್ರಕರಾದ ರಾಜಾರಾಮ್ ಶರ್ಮಾ ಅವರನ್ನು ಅಮಾನತುಗೊಳಿಸಿದೆ.
ಈ ಘಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ತೀವ್ರ ಎಚ್ಚರಿಕೆ ವಹಿಸಿದೆ. ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಸಿರಪ್ ನೀಡದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.
ಐದು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತಕ್ಕೆ ಸಾಮಾನ್ಯವಾಗಿ ಸಿರಪ್‌ಗಳ ಅಗತ್ಯ ಇರುವುದಿಲ್ಲ. ತೀರಾ ಅಗತ್ಯವಿದ್ದರೆ ಮಾತ್ರ ವೈದ್ಯರ ಸಲಹೆಯಂತೆ ಸೂಕ್ತ ಪ್ರಮಾಣದಲ್ಲಿ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.