ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಬ್ಬಿ ಸಮುದ್ರದಲ್ಲಿ ‘ಶಕ್ತಿ’ ಚಂಡಮಾರುತ ಎಂಟ್ರಿಕೊಟ್ಟಿದ್ದು, ಭಾರತೀಯ ಹವಾಮಾನ ಇಲಾಖೆ ಅ.7ರ ವರೆಗೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ.
ಮುಂಬೈ, ಥಾಣೆ, ಪಾಲ್ಘರ್, ರಾಯಗಡ್, ರತ್ನಗಿರಿ ಮತ್ತು ಸಿಂಧುದುರ್ಗ ಸೇರಿದಂತೆ ಮಹಾರಾಷ್ಟ್ರದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯು ಮಹಾರಾಷ್ಟ್ರದ ಒಳಭಾಗಗಳಲ್ಲಿ, ಅದ್ರಲ್ಲೂ ಮುಖ್ಯವಾಗಿ ಪೂರ್ವ ವಿದರ್ಭ ಮತ್ತು ಮರಾಠವಾಡದ ಕೆಲ ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ.
ಈ ಬೆನ್ನಲ್ಲೇ ಸ್ಥಳೀಯ ಆಡಳಿತ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಿದೆ.
ಗುಜರಾತ್‌ಗೆ ಅಪ್ಪಳಿಸಲಿದೆ ಚಂಡಮಾರುತ
ಹವಾಮಾನ ಇಲಾಖೆ (IMD) ವಿಜ್ಞಾನಿ ಅಭಿಮನ್ಯು ಚೌಹಾಣ್ ಪ್ರಕಾರ, ಈಶಾನ್ಯ ಅರೇಬಿಯನ್ ಸಮುದ್ರದಲ್ಲಿ ಚಂಮಾರುತ ತೀವ್ರಗೊಂಡಿದೆ. ಗಂಟೆಗೆ 18 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಅಕ್ಟೋಬರ್ 6ರಂದು ಬೆಳಗ್ಗಿನ ವೇಳೆಗೆ ಚಂಡಮಾರುತವು ಗುಜರಾತ್ ಕಡೆಗೆ ಬೀಸುವ ನಿರೀಕ್ಷೆಯಿದೆ. ಆದಾಗ್ಯೂ ರಾಜ್ಯದಲ್ಲಿ ಮಳೆಯ ಪರಿಣಾಮ ಕಡಿಮೆ ಇರಲಿದ್ದು, ಗಾಳಿಯು ಗಂಟೆಗೆ 40-55 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಸೈಕ್ಲೋನ್ ಶಕ್ತಿ ಈಗ ಎಲ್ಲಿದೆ?
ಹವಾಮಾನ ಇಲಾಖೆ ಪ್ರಕಾರ, ಶಕ್ತಿ ಚಂಡಮಾರುತವು ಪ್ರಸ್ತುತ ಗುಜರಾತ್‌ನ ನಲಿಯಾದಿಂದ ನೃಋತ್ಯಕ್ಕೆ ಸುಮಾರು 270 ಕಿಮೀ ದೂರದಲ್ಲಿ, ಪೋರ್‌ಬಂದರ್‌ನಿಂದ ಪಶ್ಚಿಮಕ್ಕೆ 300 ಕಿಮೀ ಮತ್ತು ದಕ್ಷಿಣಕ್ಕೆ 360 ಕಿಮೀ ದೂರದಲ್ಲಿದೆ. ಸುಮಾರು 8 ಕಿಮೀ ವೇಗದಲ್ಲಿ ವಾಯುವ್ಯ ದಿಕ್ಕಿಗೆ ಚಲಿಸುತ್ತಿದ್ದು, 100 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.