ಬೆಳಗಿನ ತಿಂಡಿಯಾಗಿ ಕಿಚಡಿ ತಿಂದರೆ ದಿನವಿಡೀ ಶಕ್ತಿ ಹಾಗೂ ಉತ್ಸಾಹ ತುಂಬಿರುತ್ತದೆ. ಸಾಮಾನ್ಯವಾಗಿ ಕಿಚಡಿ ಮಾಡಲು ಅಕ್ಕಿ ಬಳಸಲಾಗುತ್ತದಾದರೂ, ಇಂದು ನಾವು ಗೋಧಿ ಹಾಗೂ ತರಕಾರಿಗಳನ್ನು ಬಳಸಿ ಮಾಡಿದ ವಿಶೇಷ ಕಿಚಡಿಯ ರೆಸಿಪಿ ತಿಳಿಸಿಕೊಡುತ್ತಿದ್ದೇವೆ. ಗೋಧಿ ಬಳಕೆಯಿಂದ ಇದು ಇನ್ನಷ್ಟು ಆರೋಗ್ಯಕರವಾಗಿದ್ದು, ಮಧುಮೇಹ ಹಾಗೂ ಕೊಲೆಸ್ಟ್ರಾಲ್ ಇರುವವರಿಗೆ ಸಹ ಸೂಕ್ತವಾಗಿದೆ.
ಬೇಕಾಗುವ ಪದಾರ್ಥಗಳು:
ಗೋಧಿ – ಅರ್ಧ ಕಪ್ (6 ಗಂಟೆ ನೆನೆಸಿಡಿ)
ಹೆಸರು ಬೇಳೆ – ಅರ್ಧ ಕಪ್ (20 ನಿಮಿಷ ನೆನೆಸಿಡಿ)
ಎಣ್ಣೆ – 1 ಟೀಸ್ಪೂನ್
ಕಾಳು ಮೆಣಸು – 2–3
ಲವಂಗ – 2
ದಾಲ್ಚಿನ್ನಿ ಚಕ್ಕೆ – 1 ಇಂಚು
ಜೀರಿಗೆ – 1 ಟೀಸ್ಪೂನ್
ಹಿಂಗ್ – ಚಿಟಿಕೆ
ತೆಳ್ಳಗೆ ಕತ್ತರಿಸಿದ ಈರುಳ್ಳಿ – ಕಾಲು ಕಪ್
ಸಣ್ಣಗೆ ಹೆಚ್ಚಿದ ಮಿಶ್ರ ತರಕಾರಿಗಳು – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿನ – ಅರ್ಧ ಟೀಸ್ಪೂನ್
ಮೆಣಸಿನ ಪುಡಿ – ಒಂದೂವರೆ ಟೀಸ್ಪೂನ್
ಕೊತ್ತಂಬರಿ, ಜೀರಿಗೆ ಪುಡಿ – ಒಂದೂವರೆ ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
ತಯಾರಿಸುವ ವಿಧಾನ:
ಮೊದಲಿಗೆ ನೆನೆಸಿಟ್ಟ ಗೋಧಿಯನ್ನು ಬ್ಲೆಂಡರ್‌ನಲ್ಲಿ ಅರ್ಧ ಕಪ್ ನೀರು ಸೇರಿಸಿ ಒರಟಾಗಿ ರುಬ್ಬಿ ಪಕ್ಕಕ್ಕಿಡಿ.
ಪ್ರೆಶರ್ ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಕಾಳು ಮೆಣಸು, ಲವಂಗ, ದಾಲ್ಚಿನ್ನಿ ಹಾಗೂ ಜೀರಿಗೆ ಹಾಕಿ ಹುರಿಯಿರಿ. ನಂತರ ಹಿಂಗ್ ಹಾಕಿ, ನಂತರ ಈರುಳ್ಳಿ ಸೇರಿಸಿ 1–2 ನಿಮಿಷ ಬೇಯಿಸಿ. ಈಗ ಹೆಚ್ಚಿದ ಮಿಶ್ರ ತರಕಾರಿಗಳನ್ನು ಸೇರಿಸಿ 2–3 ನಿಮಿಷ ಫ್ರೈ ಮಾಡಿ.
ಈಗ ಒರಟಾಗಿ ರುಬ್ಬಿದ ಗೋಧಿ ಹಾಗೂ ನೆನೆಸಿಟ್ಟ ಹೆಸರು ಬೇಳೆ ಸೇರಿಸಿ ಒಂದು ನಿಮಿಷ ಮಿಶ್ರಣ ಮಾಡಿ ಅದಕ್ಕೆ ಉಪ್ಪು, ಅರಿಶಿನ, ಮೆಣಸಿನ ಪುಡಿ, ಕೊತ್ತಂಬರಿ–ಜೀರಿಗೆ ಪುಡಿ ಸೇರಿಸಿ, 3 ಕಪ್ ನೀರು ಹಾಕಿ ಚೆನ್ನಾಗಿ ಕಲಸಿ. ಕುಕ್ಕರ್ ಮುಚ್ಚಳ ಹಾಕಿ 3 ಸೀಟಿ ಬರುವವರೆಗೆ ಬೇಯಿಸಿ.
ಮುಚ್ಚಳ ತೆರೆದು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಬಿಸಿ ಗೋಧಿ–ತರಕಾರಿ ಕಿಚಡಿಯನ್ನು ಸರ್ವ್ ಮಾಡಿ.