Sunday, October 12, 2025

ಸಿಲಿಂಡರ್‌ ತುಂಬಿದ್ದ ಟ್ರಕ್‌ಗೆ ಬೆಂಕಿ: ಒಂದಾದ ಬಳಿಕ ಮತ್ತೊಂದರಂತೆ ಸ್ಫೋಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೈಪುರ-ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯ ದುಡು ಬಳಿಯಲ್ಲಿ ಮಂಗಳವಾರ ರಾತ್ರಿ ಭಾರೀ ಅಪಘಾತ ಸಂಭವಿಸಿದೆ. ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಮತ್ತೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಸಿಲಿಂಡರ್‌ಗಳು ಒಂದರ ಹಿಂದೆ ಒಂದರಂತೆ ಸ್ಫೋಟಗೊಂಡು ಹಲವು ಸ್ಫೋಟಗಳು ಸಂಭವಿಸಿವೆ. ಬೆಂಕಿಯಿಂದಾಗಿ ಹಲವಾರು ವಾಹನಗಳು ಹಾನಿಗೊಳಗಾದವು. ಬೆಂಕಿಯ ಜ್ವಾಲೆಗಳು ಹಲವಾರು ಕಿಲೋಮೀಟರ್ ದೂರದಿಂದಲೂ ಗೋಚರಿಸಿದ್ದು, ಸ್ಫೋಟದ ಶಬ್ದವು ಕೂಡ ಸಾಕಷ್ಟು ದೂರದ ತನಕ ಕೇಳಿಬಂದಿದೆ.

ಅಪಘಾತ ಸಂಭವಿಸಿದ ಮೌಜ್ಮಾಬಾದ್ ಪ್ರದೇಶದ ಸವರ್ದಾ ಕಲ್ವರ್ಟ್ ಬಳಿ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚಾರವನ್ನು ನಿಲ್ಲಿಸಲಾಗಿದೆ. ಬೆಂಕಿ ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರ ನಿರ್ದೇಶನದ ಮೇರೆಗೆ ಉಪಮುಖ್ಯಮಂತ್ರಿ ಪ್ರೇಮ್‌ಚಂದ್ ಬೈರ್ವಾ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಟ್ರಕ್ ಚಾಲಕ ಮತ್ತು ಸಹಾಯಕರನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ಯಾವುದೇ ಗಂಭೀರ ಗಾಯಗಳ ವರದಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಟ್ರಕ್ ರಸ್ತೆಬದಿಯ ಡಾಬಾದ ಬಳಿ ನಿಲ್ಲಿಸಲಾಗಿತ್ತು. ಇದೇ ವೇಳೆ ಹಿಂದಿನಿಂದ ಮತ್ತೊಂದು ಟ್ರಕ್ ಬಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ಡಿಕ್ಕಿ ಹೊಡೆದ ಟ್ರಕ್‌ನ ಚಾಲಕ ಗಾಯಗೊಂಡಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಜಿಲ್ಲಾಡಳಿತ ಮತ್ತು ಎಸ್‌ಎಂಎಸ್ ಆಸ್ಪತ್ರೆ ಆಡಳಿತವನ್ನು ಎಚ್ಚರಿಕೆಗೆ ಕರೆತರಲಾಗಿದ್ದು, ಯಾವುದೇ ಅಹಿತಕರ ಪರಿಸ್ಥಿತಿಯನ್ನು ಎದುರಿಸಲು ಕ್ರಮ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು, ಅಪಘಾತ ದುಃಖಕರವಾಗಿದೆ. ಅಗ್ನಿಶಾಮಕ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡುವಂತೆ ಹಾಗೂ ಪೀಡಿತರಿಗೆ ಅಗತ್ಯ ನೆರವು ಒದಗಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

error: Content is protected !!