Saturday, October 11, 2025

HEALTH | ಊಟದ ಜೊತೆಗೆ ಒಂದು ಸ್ಪೂನ್‌ ತುಪ್ಪ ಇರಲಿ, ಯಾಕೆ ಗೊತ್ತಾ?

ಊಟ ಯಾವುದೇ ಇರಲಿ, ಅದಕ್ಕೊಂದು ಸ್ಪೂನ್‌ ತುಪ್ಪ ಬಿದ್ದರೆ ಊಟದ ರುಚಿಯೂ ಹೆಚ್ಚಾಗುತ್ತದೆ. ಹಾಗೇ ಎಷ್ಟೊಂದು ಲಾಭವನ್ನು ಪಡೆಯುತ್ತೀರಿ. ಯಾವ ಲಾಭ? ಇಲ್ಲಿದೆ ಡೀಟೇಲ್ಸ್‌..

ತುಪ್ಪ ತಿಂದರೆ ಕೊಬ್ಬು ಹೆಚ್ಚುತ್ತದೆ ಎನ್ನುವುದು ಸಾಮಾನ್ಯವಾದ ಮಾತು. ಆದರೆ ಹೆಚ್ಚು ತುಪ್ಪ ತಿಂದರೆ ದಪ್ಪ ಆಗುವುದು ಹೌದಾದರೂ, ಅಲ್ಪ ಪ್ರಮಾಣದಲ್ಲಿ ಅದನ್ನು ತಿನ್ನುವುದು ದೇಹಕ್ಕೆ ಅಗತ್ಯ. ಅದರಲ್ಲೂ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಬೆಚ್ಚನೆಯ ತುಪ್ಪವನ್ನು ಸೇವಿಸುವುದರಿಂದ ದೇಹಕ್ಕೆ ಹಲವು ರೀತಿಯ ಲಾಭಗಳಿವೆ ಎಂಬುದನ್ನು ಅಧ್ಯಯನಗಳು ಪುಷ್ಟೀಕರಿಸಿವೆ.

ಹೊಟ್ಟೆ, ತೊಡೆ, ತೋಳು ಮುಂತಾದೆಡೆ ಜಮೆಯಾಗಿ, ಯಾವ ವ್ಯಾಯಾಮಕ್ಕೂ ಅಲ್ಲಾಡದೆ ನಿಲ್ಲುವ ಕೊಬ್ಬನ್ನು ಕರಗಿಸುವುದಕ್ಕೆ ಬೆಳಗ್ಗೆ ಮೊದಲಿಗೆ ದೇಹಕ್ಕೆ ಕೊಬ್ಬನ್ನೇ ನೀಡುವುದು ಪರಿಣಾಮಕಾರಿಯಾದ ಉಪಾಯ ಎನ್ನಲಾಗುತ್ತಿದೆ.

ಕೊಬ್ಬಿನಲ್ಲಿ ಕರಗಬಲ್ಲಂಥ‌ ಎ, ಡಿ, ಇ ಮತ್ತು ಕೆ2 ವಿಟಮಿನ್‌ಗಳು ತುಪ್ಪದಲ್ಲಿ ಇರುವುದರಿಂದ ದೇಹದ ಚಯಾಪಚಯ ಹೆಚ್ಚಿ, ಜೀರ್ಣಾಂಗಗಳ ಕ್ಷಮತೆ ವೃದ್ಧಿಸಿ, ಕಣ್ಣು, ಹೃದಯದಂಥ ಅಂಗಗಳು ಚುರುಕುಗೊಂಡು, ಚರ್ಮದ ಹೊಳಪು ಹೆಚ್ಚಿ, ರೋಗ ನಿರೋಧಕ ಶಕ್ತಿಯೂ ಸುಧಾರಿಸುತ್ತದೆ.

ಜತೆಗೆ, ಬಹುಪಾಲು ಖಾದ್ಯ ತೈಲಗಳಿಗಿಂತ ಹೆಚ್ಚಿನ ಸುಡುವ ಬಿಂದು ಅಥವಾ ಸ್ಮೋಕ್‌ ಪಾಯಿಂಟ್‌ ತುಪ್ಪಕ್ಕಿದೆ. ಹಾಗಾಗಿ ಹುರಿಯುವ, ಕರಿಯುವಂಥ ಅಡುಗೆಗಳಲ್ಲೂ ತುಪ್ಪವನ್ನು ಬಳಸುವುದು ಸುರಕ್ಷಿತ. ಅಡುಗೆ ತೈಲಗಳು ಬೇಗ ಸುಟ್ಟು ಕರಕಲಾದರೆ ಅಥವಾ ಹೊಗೆ ಬಂದರೆ, ಅಂಥವು ಖಾದ್ಯಗಳಲ್ಲಿನ ಬಳಕೆಗೆ ಯೋಗ್ಯವಲ್ಲ.

ತುಪ್ಪದಲ್ಲಿರುವ ಬಟೈರಿಕ್‌ ಆಮ್ಲವು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಉರಿಯೂತವನ್ನು ಶಮನ ಮಾಡುತ್ತದೆ. ಸತ್ವಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಜೀರ್ಣಾಂಗಗಳಲ್ಲಿ ಉತ್ತಮ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುವುದರಿಂದ ತೊಡಗಿ, ಶಕ್ತಿ ಸಂಚಯಿಸುವ, ಉರಿಯೂತ ಕಡಿಮೆ ಮಾಡುವವರೆಗೆ ಬಹಳಷ್ಟು ರೀತಿಯಲ್ಲಿ ದೇಹಕ್ಕೆ ನೆರವಾಗಬಲ್ಲವು.

ಹಾಗಾಗಿ ಬಿಸಿಯಾದ ಆಹಾರಕ್ಕೆ ಒಂದು ಚಮಚ ಶುದ್ಧ ತುಪ್ಪವನ್ನು ಬೆರೆಸಿಕೊಂಡು ಸೇವಿಸುವುದು ಎಲ್ಲ ದೃಷ್ಟಿಯಿಂದಲೂ ಹಿತಕರ. ಇದನ್ನು ಮಿತವಾಗಿ ಸೇವಿಸುವುದರಿಂದ ತೂಕವೂ ಹೆಚ್ಚುವುದಿಲ್ಲ.

error: Content is protected !!