ಹೊಸ ದಿಗಂತ ವರದಿ, ಮಂಗಳೂರು:
ಹೋಟೆಲ್ ಉದ್ಯಮಿ, ನಗರದ ಜನತಾ ಡಿಲಕ್ಸ್ ಹೊಟೇಲ್ ಮಾಲೀಕ ಪತ್ತುಮುಡಿ ಸೂರ್ಯನಾರಾಯಣ ರಾವ್ (72) ಶುಕ್ರವಾರ ನಿಧನರಾದರು.
ಅವರು ಪತ್ನಿ ಭಾರತಿ ರಾವ್, ಪುತ್ರಿ ಶ್ರೀಲಕ್ಷ್ಮೀ ಅವರನ್ನು ಅಗಲಿದ್ದಾರೆ.
ಸಣ್ಣ ವಯಸ್ಸಿನಲ್ಲೇ ಪಾಕ ವಿದ್ಯೆಯಲ್ಲಿ ಪ್ರಾವಿಣ್ಯತೆ ಪಡೆದ ಅವರು, ಹೈಸ್ಕೂಲ್ ವಿದ್ಯಾಭ್ಯಾಸದ ಬಳಿಕ ಅಡುಗೆ ಸಹಾಯಕರಾಗಿ, ಬಳಿಕ ಸಣ್ಣ ಅಂಗಡಿ ವ್ಯವಹಾರ ನಡೆಸಿ ಉದ್ಯಮ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ಆ ಬಳಿಕ ಅವರು ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡು ಹಂತ ಹಂತವಾಗಿ ಯಶಸ್ಸು ಕಂಡರು.
ಆರಂಭದಲ್ಲಿ ಮಂಗಳೂರಿನ ಕೆ. ಎಸ್. ರಾವ್ ರಸ್ತೆಯಲ್ಲಿ ‘ಜನತಾ ಡಿಲಕ್ಸ್’ ಹೆಸರಿನಲ್ಲಿ ಹೊಟೇಲ್ ಉದ್ಯಮ ಆರಂಭಿಸಿದ ಅವರು ಬಳಿಕ ಕ್ರಮೇಣ ತನ್ನ ಉದ್ಯಮವನ್ನು ವಿಸ್ತರಿಸಿ ಬಳ್ಳಾಲ್‌ಬಾಗ್ ಸಮೀಪ ಪತ್ತುಮುಡಿ ಸೌಧ ಎಂಬ ಸಮುಚ್ಚಯ ನಿರ್ಮಿಸಿ ಅಲ್ಲಿಯೂ ಹೊಟೇಲ್ ಉದ್ಯಮ ಹಾಗೂ ಕ್ಯಾಟರಿಂಗ್ ವ್ಯವಹಾರ ಆರಂಭಿಸಿದ್ದರು. ಸರಳ, ಸಜ್ಜನ ವ್ಯಕ್ತಿತ್ವ ಹೊಂದಿದ್ದರು.
ಮೃತರು ಕೊಡುಗೈ ದಾನಿಗಳಾಗಿದ್ದು ಜಿಲ್ಲೆಯ ಹಲವಾರು ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿದ್ದರು.
ಮಂಚಿ ಸಾವಿರದ ಅರಸು ಕುರಿಯಾಡಿದಾರ್ ಮೂವರ್ ದೈವಂಗಳ ಮಾಡದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರು, ಮಂಚಿ ಸುಳ್ಯ ಶ್ರೀ ಮಹಾದೇವ ದೇವಸ್ಥಾನದ ಜೀರ್ಣೋದ್ಧ್ದಾರ ಸಮಿತಿ ಗೌರವಾಧ್ಯಕ್ಷರಾಗಿದ್ದರಲ್ಲದೆ ಸ್ಥಳೀಯವಾಗಿ ಸಂಘ ಸಂಸ್ಥೆಗಳಲ್ಲಿಯು ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಮಂಗಳೂರು ಪತ್ತುಮುಡಿಯ ಹೊಟೇಲ್ ಜನತಾ ಡಿಲಕ್ಸ್ ಒಂದು ಅಡುಗೆ ಗೃಹದಿಂದ ಆರಂಭವಾದ ಪರಂಪರೆ, ಮಂಗಳೂರಿನ ಖಾದ್ಯ ಸಂಸ್ಕೃತಿಯ ಒಂದು ಅಧ್ಯಾಯವಾಗಿದೆ. ಮಂಗಳೂರಿನ ಹೃದಯಭಾಗದಲ್ಲಿರುವ ಹೊಟೇಲ್ ಜನತಾ ಡಿಲಕ್ಸ್ ಪತ್ತುಮುಡಿ ಕಳೆದ ಮೂರು ದಶಕಗಳಿಂದ ಸ್ಥಳೀಯರ ಪ್ರಿಯ ವಿಳಾಸವಾಗಿದೆ. 1990ರಲ್ಲಿ ಸಂಸ್ಥಾಪಕ ಪಿ. ಸೂರ್ಯನಾರಾಯಣ ರಾವ್ ಅವರು ಈ ಹೊಟೇಲ್ ಅನ್ನು ಪ್ರಾರಂಭಿಸಿದಾಗ, ಅವರ ಉದ್ದೇಶ ಸರಳವಾಗಿತ್ತು ಸ್ವಚ್ಛತೆಯೊಂದಿಗೆ, ಮನೆಯ ರುಚಿಯ ಆಹಾರ ಎಲ್ಲರಿಗೂ ತಲುಪಲಿ ಎಂಬುದಾಗಿತ್ತು. ಜನತಾ ಡಿಲಕ್ಸ್‌ನ ಉಪಹಾರದಲ್ಲಿ ದೊರೆಯುವ ಮಂಗಳೂರು ಬನ್ಸ್, ಗೋಳಿಬಜೆ, ಮಿನಿ ಇಡ್ಲಿ-ವಡೆ-ರಸಂ, ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಇಂದಿಗೂ ಹೊಟೇಲಿನ ಖ್ಯಾತಿಯನ್ನು ಉಳಿಸಿಕೊಂಡಿವೆ.
ಜನತಾ ಡಿಲಕ್ಸ್‌ನ ವ್ಯಾಪಾರ ಕ್ಷೇತ್ರದಲ್ಲಿ ಪತ್ತುಮುಡಿ ಸೌಧ ಎಂಬ ಶೀತಲವಾತಾನುಕೂಲಿತ ಸಭಾಂಗಣವು ಕೂಡ ಕಾರ್ಯನಿರ್ವಹಿಸುತ್ತಿದ್ದು, ಮದುವೆ, ನಿಶ್ಚಯ, ಉಪನ್ಯಾಸ ಹಾಗೂ ವಿವಿಧ ಸಮಾರಂಭಗಳಿಗೆ ಪ್ರಸಿದ್ಧವಾಗಿದೆ. ಇದರ ಶುದ್ಧ ಶಾಕಾಹಾರಿ ತತ್ವ, ಕುಟುಂಬಸ್ನೇಹಿ ವಾತಾವರಣ ಮತ್ತು ಸ್ಥಿರವಾದ ಗುಣಮಟ್ಟವೇ ಇದರ ಯಶಸ್ಸಿನ ಮೂಲವಾಗಿದೆ. ಸಾವಿರಾರು ಜನರ ಜೀವನ ಕ್ಷಣಗಳನ್ನು ಆಚರಿಸಿದ ಪತ್ತುಮುಡಿ ಸೌಧ ಮತ್ತು ಜನತಾ ಡಿಲಕ್ಸ್ ಈಗ ಸೂರ್ಯನಾರಾಯಣ ರಾವ್ ಅವರ ನೆನಪಿನ ಚಿಹ್ನೆಗಳಾಗಿವೆ.