Tuesday, October 28, 2025

ಮಹಾರಾಷ್ಟ್ರ ವೈದ್ಯೆ ಆತ್ಮಹತ್ಯೆ ಕೇಸ್: ಟೆಕ್ಕಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಸತಾರಾದ ಉಪಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಕ್ಕಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪ್ರಶಾಂತ್ ಬಂಕರ್ ಎಂದು ಗುರುತಿಸಲಾಗಿದ್ದು, ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದರು. ಮೃತ ವೈದ್ಯೆ ಆತ್ಮಹತ್ಯೆಗೂ ಮುನ್ನ ತನ್ನ ಅಂಗೈಯಲ್ಲಿ, 5 ತಿಂಗಳಿನಿಂದ ಟೆಕ್ಕಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಬರೆದುಕೊಂಡಿದ್ದರು.

ಇನ್ನೂ ವೈದ್ಯೆಯ ಮೇಲೆ ಹಲವು ಬಾರಿ ಅತ್ಯಾಚಾರ ಮತ್ತು ಕಿರುಕುಳ ನೀಡಿದ್ದ ಆರೋಪ ಹೊತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ ಗೋಪಾಲ್ ಬದ್ನೆ ತಲೆಮರೆಸಿಕೊಂಡಿದ್ದಾನೆ. ಈತನನ್ನು ಬಂಧಿಸಲು ಸತಾರ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸತಾರಾ ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ಅವರೊಂದಿಗೆ ಮಾತನಾಡಿ, ಆತ್ಮಹತ್ಯೆ ಪತ್ರದಲ್ಲಿ ಹೆಸರಿಸಲಾದ ಪೊಲೀಸ್ ಇನ್ಸ್‌ಪೆಕ್ಟರ್‌ ಅವರನ್ನು ಅಮಾನತುಗೊಳಿಸಲು ಆದೇಶಿಸಿದ್ದಾರೆ. ಇಬ್ಬರೂ ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ತುಷಾರ್ ಸಿಎಂಗೆ ತಿಳಿಸಿದ್ದಾರೆ.

ಏನಿದು ಪ್ರಕರಣ?
ಸತಾರಾದ ಉಪ ಜಿಲ್ಲಾಸ್ಪತ್ರೆಯಲ್ಲಿ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಫಾಲ್ಟನ್ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯೆ ತಮ್ಮ ಅಂಗೈಯಲ್ಲಿ ತಮಗಾದ ಕಿರುಕುಳದ ಬಗ್ಗೆ ಬರೆದುಕೊಂಡಿದ್ದಾರೆ. ಎಸ್‌ಐ ಗೋಪಾಲ್ ಬದ್ನೆ ಹಾಗೂ ಟೆಕ್ಕಿ ಪ್ರಶಾಂತ್ ಬಂಕರ್‌ನಿಂದ ತನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ. ಹೀಗಾಗಿ ಪೊಲೀಸರ ನಿರಂತರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ ಎಂದು ಉಲ್ಲೇಖಿಸಿದ್ದರು.

ತನ್ನ ಅಂಗೈಯಲ್ಲಿರುವ ಡೆತ್‌ನೋಟ್ ಅಲ್ಲದೇ, ಸಂತ್ರಸ್ತೆ ಕಳೆದ ಜೂನ್ 19 ರಂದೇ ಫಾಲ್ಟನ್ ಉಪ-ವಿಭಾಗೀಯ ಕಚೇರಿಯ ಡಿಎಸ್ಪಿಗೆ ಬರೆದ ಪತ್ರದಲ್ಲೂ ಇದೇ ರೀತಿಯ ಆರೋಪಗಳನ್ನ ಮಾಡಿದ್ದರಂತೆ. ಫಾಲ್ಟನ್ ಗ್ರಾಮೀಣ ಪೊಲೀಸ್ ಇಲಾಖೆಯ ಎಸ್‌ಐ ಗೋಪಾಲ್ ಬದ್ನೆ, ಉಪ-ವಿಭಾಗೀಯ ಪೊಲೀಸ್ ಇನ್ಸ್‌ಪೆಕ್ಟರ್‌ ಪಾಟೀಲ್ ಮತ್ತು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್‌ ಲಾಡ್‌ಪುತ್ರೆ ವಿರುದ್ಧ ಕಿರುಕುಳದ ಆರೋಪ ಹೊರಿಸಿ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದರು ಎಂದು ವರದಿಯಾಗಿದೆ.

error: Content is protected !!