March 11, 2026
Wednesday, March 11, 2026
spot_img

ಪ್ರಾಣ ಉಳಿಸಲು ಓಡಾಡಿದರೂ ಸಿಗದ ರಕ್ಷಣೆ: ಬೀದಿನಾಯಿಗಳ ದಾಳಿಗೆ ಜಿಂಕೆ ಬಲಿ

ಹೊಸ ದಿಗಂತ ವರದಿ ಸುಂಟಿಕೊಪ್ಪ:

ಬೀದಿನಾಯಿಗಳ ದಾಳಿಯಿಂದ ಪ್ರಾಣ ಉಳಿಸಿಕೊಳ್ಳಲು ಜಿಂಕೆಯೊಂದು ಮನೆಗೆ ನುಗ್ಗಿ ಅತಂಕ ಸೃಷ್ಟಿಸಿ, ಬಳಿಕ ಸಾವಿಗೀಡಾದ ಘಟನೆ ವರದಿಯಾಗಿದೆ.

ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 8ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ತೊಂಡೂರಿನಲ್ಲಿ ಸತತವಾಗಿ ಬೀದಿ ನಾಯಿಗಳಿಂದ ಬೇಟೆಗೆ ಒಳಗಾಗುತ್ತಿರುವ ಜಿಂಕೆಗಳ ಮುಂದುವರಿದ ಭಾಗ ಇದಾಗಿದೆ.

ಭಾನುವಾರ ಬೆಳಗ್ಗೆ ಅಟ್ಟಿಸಿಕೊಂಡು ಬಂದ ನಾಯಿಗಳಿಂದ ತಪ್ಪಿಸಿಕೊಳ್ಳಲು ಜಿಂಕೆಯೊಂದು ಮುಖ್ಯ ರಸ್ತೆಯಲ್ಲಿರುವ ರಾಧಾ ಕೃಷ್ಣಪ್ಪ ಅವರ ಮನೆಗೆ ನುಗ್ಗಿದೆ. ಈ ಸಂದರ್ಭ ಮನೆಯಲ್ಲಿ ರಾಧಾ ಅವರ ಸೊಸೆ ಮತ್ತು ಪುಟ್ಟ ಮಗು ಇದ್ದರೂ, ಮನೆಯ ಹಾಲ್‌ನಲ್ಲಿ ಪ್ರಾಣ ರಕ್ಷಣೆಗಾಗಿ ಓಡಾಡಿದ ಜಿಂಕೆ ಮಗುವಿನ ಆಟದ ಸಾಮಾಗ್ರಿಗಳನ್ನು ಹಾಳುಗೆಡವಿದೆ. ಮನೆಯ ಬಾಗಿಲಿಗೆ ಡಿಕ್ಕಿ ಹೊಡೆದಿದೆ. ಹೇಗೂ ಹೊರ ಬಂದ ಜಿಂಕೆ ರಸ್ತೆ ದಾಟಿ ಅರಣ್ಯ ಪ್ರವೇಶಿಸುವಷ್ಟರಲ್ಲಿ ಮತ್ತೆ ನಾಯಿಗಳ ದಾಳಿಗೆ ಒಳಗಾಗಿ ಪ್ರಾಣ ಬಿಟ್ಟಿದೆ.

ವಿಷಯ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ ಜಿಂಕೆಯ ಮೃತ ದೇಹವನ್ನು ವಾಹನದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಈ ಹೆಣ್ಣು ಜಿಂಕೆಯು ಅಂದಾಜು 12 ಪ್ರಾಯದ್ದೆಂದು ತಿಳಿದು ಬಂದಿದೆ.

ಪತ್ರಿಕೆಯೊಂದಿಗೆ ಮಾತನಾಡಿದ ರಾಧಾ ಕೃಷ್ಣಪ್ಪ ಅವರು ದೇವರ ದಯೆಯಿಂದ ಏನು ಅಹಿತಕರ ಘಟನೆ ಸಂಭವಿಸಿಲ್ಲ. ವನ್ಯಪ್ರಾಣಿ ಮತ್ತು ಬೀದಿನಾಯಿಗಳ ಹಾವಳಿಯಿಂದ ನಮಗೆ ತೊಂದರೆಯಾಗಿದ್ದರೆ ಯಾರು ಹೊಣೆ ಎಂದು ನಿಟ್ಟುಸಿರು ಬಿಟ್ಟರು.

ಜಿ.ಪಂ.ಮಾಜಿ ಸದಸ್ಯ ಮತ್ತು ಸಮಾಜ ಸೇವಕ ಆರ್.ಕೆ.ಚಂದ್ರು ಮಾತನಾಡಿ, ಈ ತಿಂಗಳಿನಲ್ಲಿ ಸರಿಸುಮಾರು 18 ಜಿಂಕೆಗಳು ಬೀದಿನಾಯಿಯ ಪಾಲಾಗಿವೆ. ಬೀದಿ ನಾಯಿಗಳ ಹಾವಳಿಯನ್ನು ಗ್ರಾಮ ಪಂಚಾಯಿತಿ ನಿಯಂತ್ರಿಸಬೇಕಾಗಿದೆ ಎಂದು ಹೇಳಿದರು.

ಶನಿವಾರ ಕೂಡಾ ಹಾಡಹಗಲೇ ಗರ್ಭಿಣಿ ಜಿಂಕೆಯೊಂದನ್ನು ನಾಯಿಗಳು ಬೇಟೆಯಾಡಿದನ್ನು ಅವರು ಉಲ್ಲೇಖಿಸಿದರು. ಅರಣ್ಯಕ್ಕೆ ಪ್ರವೇಶೀಸುವವರ ಮೇಲೆ ಮೊಕದ್ದಮೆ ದಾಖಲಿಸುವ ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ವಿಭಾಗ ಪ್ರತ್ಯೇಕವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಾಣಿ ಹಿಂಸೆಯಾಗುತ್ತಿದ್ದರೂ ಕೂಡಾ ಇಲಾಖೆಯ ಅಧಿಕಾರಿಗಳು ಮೌನವಾಗಿರುವುದು ಯಾಕೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೀದಿನಾಯಿಗಳ ಪರವಾಗಿ ಇರುವವರು ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸುವುದಲ್ಲದೆ ಬೀದಿ ನಾಯಿಗಳಿಗೆ ಆಹಾರ ಮತ್ತು ಪುನರ್‌ವಸತಿ ಕೇಂದ್ರವನ್ನು ತೆರೆಯುವಂತಾಗಬೇಕೆಂದು ಅವರು ಸಲಹೆ ನೀಡಿದರು.

ಉಪವಲಯ ಸಂರಕ್ಷಣಾಧಿಕಾರಿ ಕೆ.ಎ.ದೇವಯ್ಯ ಪ್ರತಿಕ್ರಿಯಿಸಿ, ಜಿಂಕೆಗಳ ಸಾವನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಗೆ ಲಿಖಿತ ಮನವಿ ಮಾಡಲಾಗುವುದೆಂದು ಹೇಳಿದರು.

ಈ ಕುರಿತು ಮಾಹಿತಿ ನೀಡಿದ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಅವರು, ಅರಣ್ಯ ಇಲಾಖೆಯ ಮನವಿಯನ್ನು ಆಡಳಿತ ಮಂಡಳಿ ಸಭೆಯಲ್ಲಿಟ್ಟು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !