ನಾರಾಯಣಗುರುಗಳ ಸ್ತಬ್ದಚಿತ್ರ ವಿಚಾರಕ್ಕೂ ಪ್ರಧಾನಿಗೂ ಸಂಬಂಧವಿಲ್ಲ: ಸಚಿವ ಕೋಟ

ಹೊಸದಿಗಂತ ವರದಿ, ಮಂಗಳೂರು:

ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ದಚಿತ್ರ ವಿಚಾರಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸಂಬಂಧವಿಲ್ಲ. ರಾಜಕೀಯ ಕಾರಣಕ್ಕಾಗಿ ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ವಿಷಯವನ್ನು ವಿವಾದವನ್ನಾಗಿಸಿವೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸ್ತಬ್ಧಚಿತ್ರ ವಿಚಾರದಲ್ಲಿ ವಿನಾಕಾರಣ ಕೇರಳದ ಮಾರ್ಕಿಸ್ಟ್ ಸರಕಾರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ರಾಜಕೀಯ ಲಾಭ ಪಡೆಯಲು ದಾರ್ಶನಿಕರ ಹೆಸರೆತ್ತಿರುವುದು ಖಂಡನೀಯ. ಈ ವಿಷಯದಲ್ಲಿ ವಿನಾಕಾರಣ ಪ್ರಧಾನಿ ಮೋದಿ ಅವರನ್ನು ಹಳಿಯಲಾಗುತ್ತಿದೆ. ಮೋದಿಯವರು ಶಿವಗಿರಿಗೆ ಹಿಂದೆ ಭೇಟಿ ನೀಡಿದ್ದಾಗ ನಾರಾಯಣಗುರುಗಳ ಗುಣಗಾನ ಮಾಡಿ ಸ್ಥಳ ಅಭಿವೃದ್ಧಿಗಾಗಿ ೭೦ ಕೋಟಿ ರೂ. ಬಿಡುಗಡೆಗೆ ಆದೇಶ ಮಾಡಿದ್ದು ಕೆಲಸ ಪ್ರಗತಿಯಲ್ಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಶಿವಗಿರಿ ಮಠದಲ್ಲಿ ನಾರಾಯಣಗುರುಗಳು ಸಮಾಧಿಸ್ಥರಾದರು. ವಿಶಾಲವಾದ ಜಮೀನು ಅಲ್ಲಿದೆ, ಅದನ್ನು ಸ್ವಾಧೀನ ಪಡಿಸಲು ಕೇರಳ ಸರಕಾರ ಮುಂದಾಗಿದ್ದು, ಬಳಿಕ ಸುಪ್ರೀಂಕೋರ್ಟ್ ಆದೇಶದಿಂದಾಗಿ ಅದು ಟ್ರಸ್ಟ್‌ನಿಂದ ನಡೆಯುತ್ತಿದೆ ಎಂದರು.
ಕೇರಳದ ಶಿವಗಿರಿಯಲ್ಲಿರುವ ಬ್ರಹ್ಮಶ್ರೀ ನಾರಾಯಣಗುರುಗಳ ಮಠವನ್ನೇ ಸ್ವಾಧೀನ ಪಡಿಸಿಕೊಂಡು ಅಲ್ಲಿನ 24 ಸನ್ಯಾಸಿಗಳನ್ನು ಬೀದಿಗೆ ಅಟ್ಟಿದ್ದ ಕೇರಳದ ಎಡಪಂಥೀಯರು ಈಗ ವಿನಾಕಾರಣ ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿಯವರ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಸ್ತಬ್ಧಚಿತ್ರದಲ್ಲಿ ನಾರಾಯಣಗುರುಗಳ ಬದಲಿಗೆ ಶಂಕರಾಚಾರ್ಯರ ಪ್ರತಿಮೆ ಇರಿಸುವಂತೆ ಕೇಂದ್ರ ಸರಕಾರ ಹೇಳಿರುವುದಕ್ಕೆ ಆಧಾರಗಳಿದ್ದರೆ ನೀಡಲಿ ಎಂದು ಸಚಿವರು ಹೇಳಿದರು.
ಸ್ತಬ್ದಚಿತ್ರ ವಿಚಾರದ ಬಗ್ಗೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರನ್ನು ಸೋಮವಾರ ಭೇಟಿಯಾಗಿ ಅವರಿಗೆ ವಸ್ತುಸ್ಥಿತಿ ವಿವರಿಸಿದ್ದೇವೆ. ಅವರು ಕೈಗೊಳ್ಳುವ ಎಲ್ಲಾ ಸದುದ್ದೇಶದ ಕಾರ್ಯಗಳಿಗೆ ನಮ್ಮ ಬೆಂಬಲ ಸೂಚಿಸಿದ್ದೇವೆ. 26ರಂದು ಅವರು ಹಮ್ಮಿಕೊಂಡಿರುವ ಗುರುಗಳ ಭಾವಚಿತ್ರ ಸಹಿತ ಮೆರವಣಿಗೆಗೆ ಬೆಂಬಲ ನೀಡಿದ್ದೇವೆ ಎಂದು ಸಚಿವ ಕೋಟ ತಿಳಿಸಿದರು.
ಈ ವೇಳೆ ನಮ್ಮ ಮಾತುಗಳನ್ನು ಪೂಜಾರಿ ಕೇಳಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ನುಸುಳದಂತೆ ನೋಡಿಕೊಳ್ಳುವುದಾಗಿ ಅವರು ಹೇಳಿದ್ದಾರೆ ಎಂದು ತಿಳಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ, ಸತೀಶ ಕುಂಪಲ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!