ದಿಗಂತ ವರದಿ ಚಿತ್ರದುರ್ಗ:
ಸೊಂಡೇಕೊಳ ಗ್ರಾ.ಪಂ. ವ್ಯಾಪ್ತಿಯಲ್ಲಿ ೫ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದ್ದು, ಆರು ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಸೋಂಡೇಕೊಳ ಗ್ರಾಮದಲ್ಲಿ ೧೪-೧೫ನೇ ಹಣಕಾಸು ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ನೂತನ ಗ್ರಾ.ಪಂ. ಕಟ್ಟಡದ ಅಡಿಗಲ್ಲು ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೊಂಡೇಕೊಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ೧೦ ಕೋಟಿಗಿಂತ ಹೆಚ್ಚು ಅನುದಾನದಲ್ಲಿ ಚೆಕ್ ಡ್ಯಾಂ, ಸಿಸಿ.ರಸ್ತೆಗಳು, ರಸ್ತೆ ಡಾಂಬರೀಕರಣ, ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನುಳಿದ ಎಲ್ಲಾ ಕಾಮಗಾರಿಗಳಿಗೆ ೫ ಕೋಟಿಗಿಂತ ಹೆಚ್ಚು ಹಣ ನೀಡಿದ್ದು, ಕಾಮಗಾರಿಗಳು ೬ ತಿಂಗಳಲ್ಲಿ ಮುಕ್ತಾಯವಾಗಲಿದೆ. ನೂತನ ಗ್ರಾ.ಪಂ. ಕಟ್ಟಡವನ್ನು ೩೨ ಲಕ್ಷ ವೆಚ್ಚದಲ್ಲಿ ಎಲ್ಲಾ ಸೌಲಭ್ಯ ಸೇರಿದ ಹೈಟೆಕ್ ಕಟ್ಟಡ ಕಟ್ಟಲು ತಿಳಿಸಿದ್ದೇನೆ ಎಂದರು.
ಎರಡು ಅಂತಸ್ತಿನ ಕಟ್ಟಡ ನಿರ್ಮಣ ಮಾಡಲಾಗುತ್ತಿದೆ. ಅಧಿಕಾರಿ ಮತ್ತು ಜನಪ್ರತಿನಿಧಿಗಳು ವಿಶೇಷ ಕೊಠಡಿಗಳು ಸೇರಿ ಶೌಚಾಲಯ ನಿರ್ಮಿಸಲು ತಿಳಿಸಿದ್ದೇನೆ. ಸೊಂಡೇಕೊಳ ಗ್ರಾಮಕ್ಕೆ ಸಿ.ಸಿ.ರಸ್ತೆ ಕಾಮಗಾರಿಗೆ ೨೫ ಲಕ್ಷ ನೀಡಿದ್ದು, ನೂತನ ಪಂಚಾಯತಿ ಕಟ್ಟಡ ಮುಂಭಾಗದಲ್ಲಿ ಮೊದಲು ರಸ್ತೆ ನಿರ್ಮಿಸಿಕೊಳ್ಳಿ. ಗ್ರಾ.ಪಂ. ಗ್ರಾಮದ ಸುಪ್ರೀಂ ಆಗಿದ್ದು, ಗ್ರಾಮದ ಕೊನೆಯ ಪ್ರಜೆಗೆ ಪಿಂಚಣಿ ಸೇರಿ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸ ಮಾಡಿ ಎಂದು ಗ್ರಾ.ಪಂ. ಸದಸ್ಯರಿಗೆ ತಿಳಿಸಿದರು.
ರಾಜ್ಯದ ಎಲ್ಲಾ ಗ್ರಾ.ಪಂ.ಗಳಿಗೆ ರಾಜ್ಯ ಸರ್ಕಾರದಿಂದ ಮನೆಗಳು ಬಂದಿವೆ. ಆದರೆ ಕಡಿಮೆ ಮನೆಗಳು ಮಂಜೂರುರಾಗಿರುವುದು ನನಗೆ ತಿಳಿದಿದೆ. ಮನೆಯ ಅವಶ್ಯಕತೆ ಇದ್ದು, ಹೆಚ್ಚುವರಿ ಪಟ್ಟಿ ಮಾಡಲು ಎಲ್ಲಾ ಪಂಚಾಯತಿ ಪಿಡಿಓ ಅವರಿಗೆ ತಿಳಿಸಿದ್ದೇನೆ. ಎಲ್ಲಾ ಜನಾಂಗದವರಿಗೆ ಅನ್ಯಾಯವಾಗದಂತೆ ಮನೆ ಬಂದ ಕೂಡಲೇ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾತ್ರಾಳ್ ಕೆರೆಯಿಂದ ಈಚಲನಾಗೇನಹಳ್ಳಿಗೆ ನೀರನ್ನು ಲಿಫ್ಟ್ ಮಾಡಿ, ನಂತರ ಪೈಪ್ ಲೈನ್ ಮೂಲಕ ಈ ಭಾಗದ ಕೆರೆಗಳಿಗೆ ನೀರುಣಿಸುವ ಕೆಲಸ ಮಾಡಲಾಗುತ್ತಿದೆ. ಇದು ಈ ಭಾಗದ ರೈತರು ಮತ್ತು ನನ್ನ ತಾಲೂಕಿನ ನೂರಾರು ಹಳ್ಳಿಗಳ ಸಾವಿರಾರು ರೈತರು ಅನೇಕ ಬಾರಿ ಮನವಿ ಮಾಡಿದ್ದರು. ಈ ಕೆಲಸಕ್ಕೆ ನಾನು ಸಿಎಂ ಬೊಮ್ಮಾಯಿ ಅವರಿಗೆ ಪಟ್ಟು ಹಿಡಿದು ನೀರು ತರುವ ಕೆಲಸ ಮಾಡಿದ್ದು, ರೈತರ ಆಸೆ ಈಡೇರಿಸಿದ ತೃಪ್ತಿ ನನಗಿದೆ. ನೀರು ಬರಲು ಸಮಯ ಬೇಕು. ಮುಂದಿನ ವರ್ಷಗಳು ಸಂತೃಪ್ತಿ ವರ್ಷ ಎಂದು ಎಲ್ಲ್ಲರೂ ಹೇಳುತ್ತಿದ್ದು, ಅದನ್ನು ನಾನು ಬಯಸುತ್ತಿದ್ದೇನೆ. ರೈತರಿಗೆ ಉತ್ತಮ ಮಳೆ ಬೆಳೆಯಾಗಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ನಾನು ಚುನಾವಣೆಗೆ ಸ್ವರ್ಧೆ ಮಾಡಿದಾಗ ಮೊದಲು ಬಂದು ಬೆಂಬಲ ಸೂಚಿದ ಸದಸ್ಯರಲ್ಲಿ ಸೊಂಡೇಕೊಳ ಗ್ರಾ.ಪಂ. ಸದಸ್ಯರು ಮೊದಲಿಗರು. ನಾನು ಗೆದ್ದ ಮೇಲೆ ಮೊದಲ ಕಾರ್ಯಕ್ರಮ ಸೊಂಡೇಕೊಳ ಗ್ರಾ.ಪಂ. ಉದ್ಘಾಟನಾ ಕಾರ್ಯಕ್ರಮ ಆಗಿರುವುದು ಸಂತಸ ತಂದಿದೆ. ಶಾಸಕ ತಿಪ್ಪಾರೆಡ್ಡಿ ಅವರು ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಸರ್ಕಾರದಿಂದ ಅನುದಾನ ತಂದು ಪ್ರತಿ ಹಳ್ಳಿಯ ಮೂಲೆಗಳನ್ನು ಹುಡುಕಿ ರಸ್ತೆ ಕಾಮಗಾರಿ ಮಾಡುತ್ತಿರವುದರಿಂದ ನನಗೆ ರಸ್ತೆಗೆ ಹಣ ನೀಡುವ ಅವಶ್ಯಕತೆ ಇಲ್ಲವಾಗಿದೆ ಎಂದರು.
ಶಾಸಕರು ಮನವೊಲಿಸಿ ಈ ಭಾಗದ ಕೆರೆಗಳಿಗೆ ನೀರು ತರುವ ಕೆಲಸ ಮಾಡಿರುವುದು ಒಂದು ಐತಿಹಾಸಿಕ ಕಾರ್ಯ. ಶಾಸಕರು ಪ್ರತಿ ಹಳ್ಳಿಯಲ್ಲಿ ಮೂಲಭುತ ಸೌಕರ್ಯಕ್ಕೆ ಒತ್ತು ನೀಡುವ ಮೂಲಕ ಅಭಿವೃದ್ಧಿ ಪರ್ವಕ್ಕೆ ನಾಂದಿಯಾಡಿದ್ದಾರೆ. ಶಾಸಕರು ಮತ್ತು ನಾನು ಸೇರಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಶ್ರಮಿಸುತ್ತೇವೆ. ಶಾಸಕರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಗ್ರಾ.ಪಂ. ಅಧ್ಯಕ್ಷೆ ಸಿ.ಉಷಾ, ಉಪಾಧ್ಯಕ್ಷ ಜಯಪ್ಪ, ಕಲ್ಲಪ್ಪ ಬಿ.ಜೆ., ಸಂತೋಷ, ಭಾರತಮ್ಮ, ವಿಶಾಲಾಕ್ಷಮ್ಮ, ಓಬಮ್ಮ, ಶಿವಪ್ಪ, ಯಲ್ಲಮ್ಮ, ಲಕ್ಷ್ಮಮ್ಮ, ಮಧುಕುಮಾರ್, ಉಮೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ವೀರಪ್ಪ, ಗ್ರಾ.ಪಂ. ಪಿಡಿಓ, ಕಾರ್ಯದರ್ಶಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.