ಗ್ರಾಮೀಣ ಮಟ್ಟದಿಂದಲೇ ಯುವ ಸಬಲೀಕರಣಕ್ಕೆ ಪ್ಲ್ಯಾನ್- ಆರ್‌ಡಿಪಿಆರ್ ಮತ್ತು ಯುವ ಸಬಲೀಕರಣ ಇಲಾಖೆ ದಿಟ್ಟ ಹೆಜ್ಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟದಿಂದಲೇ ಯಶಸ್ವಿಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಕಾರ್ಯಕ್ರಮ ರೂಪಿಸಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಅಭಿವೃದ್ಧಿ ಯೋಜನೆಗಳಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪಂಚಾಯತ್ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುತ್ತಿವೆ. ಹಾಗಾಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶ ರಾಜ್ಯ ಸರಕಾರ ಹೊಂದಿದೆ.

ರಾಜ್ಯದ ಪ್ರತಿಯೊಂದು ಗ್ರಾ.ಪಂ. ಮಟ್ಟದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಮಿತಿಯನ್ನು 2019ರಲ್ಲಿ ರಚಿಸಲಾಗಿದೆ. ಆದರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿ ಗ್ರಾ.ಪಂ. ಕೆಡಿಪಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ಸ್ಥಳೀಯ ಯುವಕ, ಯುವತಿ, ಸಂಘ, ಸಂಸ್ಥೆಗಳು, ಅಧ್ಯಕ್ಷರು, ಕಾರ್ಯದರ್ಶಿಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ. ಅವರು ಆಹ್ವಾನಿತ ಸದಸ್ಯರಾಗಿರುತ್ತಾರೆ ಎಂದು ಆದೇಶ ಹೊರಡಿಸಲಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರತಿವರ್ಷ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇಲಾಖೆಯ ಕಾರ್ಯಕ್ರಮಗಳು ಗ್ರಾಮೀಣ ಮಟ್ಟದಿಂದಲೇ ಎಲ್ಲರಿಗೂ ತಲುಪಬೇಕೆಂಬ ಗುರಿ ಹೊಂದಲಾಗಿದೆ. ಆದರೆ ಸಿಬ್ಬಂದಿ ಕೊರತೆಯಿಂದ ಪಂಚಾಯತ್ ಮಟ್ಟದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲು ಹಿನ್ನಡೆಯಾಗುತ್ತಿದೆ. ಹಾಗಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಸ್ಥಳೀಯರು, ಸಂಘ ಸಂಸ್ಥೆಗಳು, ಅಧ್ಯಕ್ಷರು, ಕಾರ್ಯದರ್ಶಿಗಳನ್ನು ನಿಯೋಜಿಸಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.

ಏನಿದು ಕಾರ್ಯಕ್ರಮ?
ಎಲ್ಲಾ ಹಳ್ಳಿಗಳಲ್ಲಿ ದೇಸೀ, ಜಾನಪದ ಮತ್ತು ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ನೀಡಲು ಗ್ರಾಮೀಣ ಕ್ರೀಡೋತ್ಸವವನ್ನು ಆಯೋಜಿಸಲಾಗುತ್ತಿದೆ. ಅಲ್ಲದೇ ‘ನಮ್ಮೂರ ಶಾಲೆಗೆ ನಮ್ಮ ಯುವಜನರು’ ಕಾರ್ಯಕ್ರಮವನ್ನು ಶಾಲೆಗಾಗಿ ಗಣನೀಯ ಕೊಡುಗೆ ನೀಡುವ ಯುವ ಸಂಘಗಳನ್ನು ತಾಲೂಕಿಗೆ ಒಂದರಂತೆ ಗುರುತಿಸಿ ಪುರಸ್ಕಾರ ನೀಡಲಾಗುತ್ತಿದೆ. ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯನ್ನು ಎನ್‌ಎಸ್‌ಎಸ್ ಸ್ವಯಂ ಸೇವಕರ ಮೂಲಕ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಸಹಾಯ ನೀಡಲಾಗುತ್ತದೆ.

ಇಲಾಖೆಗಳ 15 ಅಂಶಗಳ ಕಾರ್ಯಕ್ರಮ:

1. ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಮೂಲಕ 1-5 ಎಕರೆಯಲ್ಲಿ ಆಟದ ಮೈದಾನ ನಿರ್ಮಾಣ, ದೈಹಿಕ ಶಿಕ್ಷಣ ಶಿಕ್ಷಕರ ಮೂಲಕ ನಿರ್ವಹಣೆ.

2. ಜಿ.ಪಂ. ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತು ಕ್ರೀಡಾ ಗಂಟು ಖರೀದಿಗೆ ಶೇ. 2ರಷ್ಟು ಅನುದಾನ ಮೀಸಲಿರಿಸುವುದು.

3. ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಪುನಶ್ಚೇತನಗೊಳಿಸಲು ಸಾಂಸ್ಕೃತಿಕ ಕೇಂದ್ರಗಳ ಸ್ಥಾಪನೆ ಹಾಗೂ ಗ್ರಾಮೀಣ ಕಲಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆಗೆ ಯುವ ಸಂಘಗಳ ಮೂಲಕ ಉತ್ತೇಜನ ನೀಡುವುದು.

4. ಕರಕುಶಲ ಕಲೆ ಉತ್ಪನ್ನಗಳ ಯುಎನ್‌ಡಿಪಿ http://www.Kaushalkar.com ನಲ್ಲಿ ದಾಖಲಿಸುವುದು.

5. ಯುವ ಸಂಘಸಂಸ್ಥೆಗಳ ಮೂಲಕ ಮಾರುಕಟ್ಟೆಯ (ಎಪಿಎಂಸಿ, ಹಾಪ್‌ಕಾಮ್ಸ್) ಮೂಲಕ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸುವುದು.

6. ಯುವಜನ ಮೇಳ, ಕ್ರೀಡಾ ಮೇಳಗಳ ಆಯೋಜನೆ, ಧಾರ್ಮಿಕ ಸಾಮರಸ್ಯ ಮೂಡಿಸುವುದು.

7. ಉತ್ತಮ ಸಾಧಕರಿಗೆ ಕ್ರೀಡಾ ಹಾಗೂ ಯುವ ಪ್ರಶಸ್ತಿ ಬಹುಮಾನ ವಿತರಣೆ.

8. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಯುವಕ/ಯುವತಿ, ಸಂಘ ಸಂಸ್ಥೆಗಳ ನೋಂದಣಿ ಮತ್ತು ಪ್ರೋತ್ಸಾಹ ನೀಡುವುದು.

9. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಿಶೇಷ ಕ್ರೀಡಾನ್ವೇಷಣೆ ಮತ್ತು ತರಬೇತಿ ನೀಡುವುದು.

10. ಸಾಹಸಮಯ ಕ್ರೀಡೆಗಳ ಅಡಿಯಲ್ಲಿ ಜಲಸಾಹಸ, ವಾಯು ಸಾಹಸ ಮತ್ತು ಭೂಸಾಹಸ ಕ್ರೀಡೆಗಳ
ತರಬೇತಿಯನ್ನು ಯುವಜನರಿಗೆ ಆಯೋಚಿಸುವುದು.

11. ಗ್ರಾಮೀಣ ಕ್ರೀಡಾಪಟುಗಳಿಗೆ ಕ್ರೀಡಾ ಪೌಷ್ಟಿಕಾಹಾರ ನೀಡುವುದು ಮತ್ತು ಕ್ರೀಡಾ ವಿಜ್ಞಾನದ ಮೂಲಕ ವೈಜ್ಞಾನಿಕ ತರಬೇತಿಯನ್ನು ನೀಡುವುದು.

12. ಯುವ ಜನರಿಗೆ ಮಾನಸಿಕ ಆರೋಗ್ಯವನ್ನು ಸದೃಢಗೊಳಿಸಲು, ಆಪ್ತ ಸಮಾಲೋಚನೆಯನ್ನು ಗ್ರಾಮ ಮಟ್ಟದಿಂದಲೇ ಆಯೋಜಿಸುವುದು.

13. ಕ್ರೀಡಾ ಕ್ಷೇತ್ರದಲ್ಲಿ, ಆಸಕ್ತಿ ತೋರುವ ಯುವ ಪ್ರತಿಭೆಗಳನ್ನು ಅನ್ವೇಷಣೆ ಮಾಡಿ ಸೂಕ್ತ ತರಬೇತಿ ನೀಡುವುದು.

14. ಎನ್‌ಎಸ್‌ಎಸ್ ಮೂಲಕ ಗ್ರಾಮ ಮಟ್ಟದಲ್ಲಿ, ಯುವ ಗ್ರಾಮಸಭೆ, ವಿಶೇಷ ವೈದ್ಯಕೀಯ ಶಿಬಿರಗಳು, ಶ್ರಮದಾನ ಶಿಬಿರಗಳನ್ನು ಆಯೋಜಿಸುವುದು.

15. ಪರಿಸರ ಮತ್ತು ಸಂರಕ್ಷಣೆ ಕಾರ್ಯಕ್ರಮಗಳ ಬಗ್ಗೆ ತೊಡಗಿಸಿಕೊಳ್ಳುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!