ಹೊಸದಿಗಂತ ಡಿಜಿಟಲ್ ಡೆಸ್ಕ್
ಹಿಜಾಬ್ ವಿವಾದ ಹಿನ್ನೆಲೆ ಇಂದಿನಿಂದ ಫೆಬ್ರುವರಿ.22ರವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಬರುವ ಎಲ್ಲಾ ಶಾಲಾ-ಕಾಲೇಜುಗಳ ಸುತ್ತಲೂ 200 ಮೀಟರ್ವರೆಗೆ ಜನರು ಗುಂಪುಗೂಡದಂತೆ 144 ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.
ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಶಾಲಾ-ಕಾಲೇಜು ಹಾಗೂ ಇನ್ನಿತರ ಶೈಕ್ಷಣಿಕ ಸಂಸ್ಥೆಗಳ ಮುಂದೆ ನಾಲ್ಕು ಜನರಿಗಿಂತ ಹೆಚ್ಚು ಜನರು ಸೇರುವಂತಿಲ್ಲ. ಒಂದು ವೇಳೆ ಕಾನೂನು ಉಲ್ಲಂಘನೆ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಹಿಜಾಬ್ ಸಂಘರ್ಷದಲ್ಲಿ ಬೆಂಗಳೂರು ನಗರದಲ್ಲಿ ಅಹಿತಕರ ಘಟನೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಶಾಲಾ – ಕಾಲೇಜು ಬಳಿ ಸೂಕ್ತ ಭದ್ರತೆ ತೆಗೆದುಕೊಳ್ಳಲಾಗಿದೆ. ನಗರದಲ್ಲಿ ಯಾರೂ ಕೂಡ ಗುಂಪು ಸೇರುವಂತಿಲ್ಲ. ಯಾರಾದರೂ ಗಲಾಟೆ ಮಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಶಾಲಾ – ಕಾಲೇಜುಗಳ ಆಡಳಿತ ಜೊತೆ ಸ್ಥಳೀಯ ಪೊಲೀಸರು ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.