ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ. ಈ ಕುರಿತು ಟರ್ಕಿ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಮುಂದಿನ ಸುತ್ತಿನ ಮಾತುಕತೆ ನವೆಂಬರ್ 6ರಂದು ನಡೆಯಲಿದೆ ಎಂದು ಹೇಳಿದೆ.
ಇಸ್ತಾನ್‌ಬುಲ್‌ನಲ್ಲಿ ನಾಲ್ಕು ದಿನಗಳ ನಂತರದ ಚರ್ಚೆಗಳು ಮಂಗಳವಾರ ಯಾವುದೇ ನಿರ್ದಿಷ್ಟ ಒಪ್ಪಂದವಿಲ್ಲದೆ ಕೊನೆಗೊಂಡಿತ್ತು. ಆದರೆ ಟರ್ಕಿ ಮತ್ತು ಕತಾರ್‌ನ ರಾಜತಾಂತ್ರಿಕ ಪ್ರಯತ್ನಗಳ ನಂತರ, ಎರಡೂ ಕಡೆಯವರು ಗುರುವಾರ ಮಾತುಕತೆ ನಡೆದಿ ಒಂದು ಒಪ್ಪಂದಕ್ಕೆ ಬಂದಿವೆ.
ಅಕ್ಟೋಬರ್ 25 ರಿಂದ 30 ರವರೆಗೆ ಇಸ್ತಾನ್‌ಬುಲ್‌ನಲ್ಲಿ ನಡೆದ ಅಫ್ಘಾನಿಸ್ತಾನ, ಪಾಕಿಸ್ತಾನ, ಟರ್ಕಿ ಮತ್ತು ಕತಾರ್ ನಡುವಿನ ಸಭೆಗಳು ಅಕ್ಟೋಬರ್ 18-19 ರಂದು ದೋಹಾದಲ್ಲಿ ನಡೆದ ಕದನ ವಿರಾಮ ಒಪ್ಪಂದವನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದವು.
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್ ಜಿಯೋ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಕತಾರ್ ಮತ್ತು ಟರ್ಕಿಯ ಕೋರಿಕೆಯ ಮೇರೆಗೆ ಪಾಕಿಸ್ತಾನವು ಶಾಂತಿಗೆ ಮತ್ತೊಂದು ಅವಕಾಶ ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದರು.
ಮಾತುಕತೆ ಸಮಯದಲ್ಲಿ ಇಸ್ತಾನ್‌ಬುಲ್‌ನಲ್ಲಿ ಉಳಿಯಲು ಪಾಕಿಸ್ತಾನಿ ನಿಯೋಗಗಳನ್ನು ಕೇಳಲಾಗಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿದ್ದು, ಇದಕ್ಕೆ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ ಕಾರಣ ಎಂದು ಪಾಕಿಸ್ತಾನ ಆರೋಪಿಸಿದೆ. 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ ಈ ಗುಂಪು ಅಫ್ಘಾನಿಸ್ತಾನದಲ್ಲಿ ಆಶ್ರಯ ಪಡೆದಿದೆ ಎಂದು ಇಸ್ಲಾಮಾಬಾದ್ ಹೇಳುತ್ತದೆ. ತನ್ನ ಪ್ರದೇಶವನ್ನು ಪಾಕಿಸ್ತಾನದ ವಿರುದ್ಧ ಬಳಸಲಾಗುತ್ತಿದೆ ಎಂಬುದನ್ನು ತಾಲಿಬಾನ್ ನಿರಾಕರಿಸಿದೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿದೆ. ಎರಡೂ ದೇಶಗಳ ಸೇನೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಡಜನ್ಗಟ್ಟಲೆ ಸೈನಿಕರು ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರ, ಟರ್ಕಿ ಮತ್ತು ಕತಾರ್ ಎರಡೂ ಕಡೆಯವರನ್ನು ಮಾತುಕತೆಗಾಗಿ ಮತ್ತೆ ಸಭೆ ನಡೆಸಲು ಪ್ರಯತ್ನಿಸಿದ್ದವು.

