ಹೊಸದಿಗಂತ ವರದಿ, ಕೊಡಗು:
ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನ ಪ್ರಯುಕ್ತ ನಗರದ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಾರ್ಡ್ನಲ್ಲಿ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಮತ್ತು ಶಾಸಕ ಕೆ.ಜಿ.ಬೋಪಯ್ಯ ಅವರು ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಮೂಲಕ ಭಾನುವಾರ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಪೋಲಿಯೊ ನಿರ್ಮೂಲನೆ ಮಾಡುವಲ್ಲಿ 1995ರಿಂದ ಪಲ್ಸ್ ಪೋಲಿಯೊ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಐದು ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಕೊಡಿಸುವಂತಾಗಬೇಕು ಎಂದು ಕರೆ ನೀಡಿದರು.
ಈ ಹಿಂದೆ ವರ್ಷಕ್ಕೆ ಎರಡು ಬಾರಿ ಪಲ್ಸ್ ಪೋಲಿಯೊ ಅಭಿಯಾನ ಹಮ್ಮಿಕೊಳ್ಳಲಾಗುತ್ತಿತ್ತು, ಕೋವಿಡ್ ನಂತರ ವರ್ಷಕೊಮ್ಮೆ ಕಾರ್ಯಕ್ರಮ ನಡೆಯುತ್ತಿದ್ದು, ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಇತ್ತೀಚೊನ ವರ್ಷಗಳಲ್ಲಿ ರಾಷ್ಟ್ರದಲ್ಲಿ ಪೋಲಿಯೊ ಪ್ರಕರಣಗಳು ಕಂಡುಬಂದಿಲ್ಲ, ಆದರೂ ಪೋಲಿಯೊ ಬರದಂತೆ ತಡೆಯುವುದು ಅತಿಮುಖ್ಯ. ಆದ್ದರಿಂದ ಪೋಲಿಯೊ ಅಭಿಯಾನವನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ಬೋಪಯ್ಯ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಮಾತನಾಡಿ, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕಿಸಬೇಕು ಎಂದು ಕೋರಿದರು.
ಪಲ್ಸ್ ಪೋಲಿಯೊ ಹನಿ ಹಾಕಿಸದಿರುವ ಮಕ್ಕಳಿಗೆ ಗ್ರಾಮೀಣ ಪ್ರದೇಶದಲ್ಲಿ ಫೆ.28, ಮಾರ್ಚ್ 1 ರಂದು ಹಾಗೆಯೇ ನಗರ/ ಪಟ್ಟಣ ಪ್ರದೇಶಗಳಲ್ಲಿ ಫೆ, 28, ಮಾರ್ಚ್ 1 ಮತ್ತು 2 ರಂದು ಮನೆ ಮನೆಗೆ ಭೇಟಿ ನೀಡಿ ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕಲಾಗುವುದು ಎಂದು ಜಿಲ್ಲಾ ಅವರು ತಿಳಿಸಿದರು.
ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 37,975 ಮಕ್ಕಳು ಹಾಗೂ ನಗರ ಪ್ರದೇಶದಲ್ಲಿ 4,400 ಸೇರಿದಂತೆ 5 ವರ್ಷದೊಳಗಿನ ಒಟ್ಟು 42,375 ಮಕ್ಕಳನ್ನುಗುರುತಿಸಲಾಗಿದೆ ಎಂದು ಡಿಎಚ್ಒ ಅವರು ತಿಳಿಸಿದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ಮಾತನಾಡಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಪಡೆಯಲಾಗಿದೆ. ಗಿರಿಜನ ಹಾಡಿ ಪ್ರದೇಶಗಳು ಸೇರಿದಂತೆ ಲೈನ್ಮನೆಗಳು, ಎಲ್ಲಾ ಕಡೆಗಳಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ನೀಡಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಡಾ.ಆನಂದ, ಡಾ.ವಿಶಾಲ್ ಕುಮಾರ್, ಡಾ.ಪುರುಷೋತ್ತಮ, ಡಾ.ಹರ್ಷ ಮತ್ತಿತರರು ಇದ್ದರು.