ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ 2.0: ನಗಾರಿ ಬಾರಿಸುವ ಮೂಲಕ ಪಾದಯಾತ್ರೆ ಪ್ರಾರಂಭ

ಹೊಸದಿಗಂತ ವರದಿ, ರಾಮನಗರ:

ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಮೇಕೆದಾಟು ಹೋರಾಟಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ವಂದೇ ಮಾತರಂ, ನಾಡಗೀತೆ, ರೈತಗೀತೆ ಮೂಲಕ ಮೇಕೆದಾಟು ಪಾದಯಾತ್ರೆ 2.0ಗೆ ರೇಷ್ಮೆನಗರಿ ರಾಮನಗರದಲ್ಲಿ ಚಾಲನೆ ನೀಡಲಾಯಿತು.
ಆದಿಚುಂಚನಗಿರಿ ಕಿರಿಯ ಶ್ರೀಗಳು ಸೇರಿದಂತೆ ಕಾಂಗ್ರೆಸ್ ಮುಖಂಡರು ನಗಾರಿ ಬಾರಿಸುವ ಮೂಲಕ ಪಾದಯಾತ್ರೆ ಪ್ರಾರಂಭಿಸಿದರು.
ಪಾದಯಾತ್ರೆ ಚಾಲನೆ ನೀಡುವ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆದಿ ಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಮಠದ ಅನ್ನದಾನೇಶ್ವರ ಶ್ರೀಗಳ‌ ಆಶೀರ್ವಾದ ಪಡೆದರು. ನಂತರ ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಈ ಹೋರಾಟ ಯಶಸ್ವಿ ಆಗಲಿ, ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡರು.
ಪಾದಯಾತ್ರೆಗೆ ಕಾಂಗ್ರೆಸ್ ಮುಖಂಡರ ಸಾಥ್ : ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಆದಿಚುಂಚನಗಿರಿಯ ರಾಮನಗರ ಶಾಖಾ ಮಠದ ಅನ್ನದಾನಿ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವರಾದ ಕೆ.ಹೆಚ್ ಮುನಿಯಪ್ಪ, ಸಂಸದ ಡಿ.ಕೆ. ಸುರೇಶ್, ರಾಜ್ಯದ ಮಾಜಿ ಸಚಿವರಾದ ಹೆಚ್​.ಕೆ ಪಾಟೀಲ್, ಅಲ್ಲಂ ವೀರಭದ್ರಪ್ಪ, ಹೆಚ್​. ಎಂ. ರೇವಣ್ಣ, ಎಂ.ಬಿ. ಪಾಟೀಲ್, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಕೆಪಿಸಿಸಿ ಕಾರ್ಯಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ವಿಧಾನ ಪರಿಷತ್ ವಿರೋಧ ಪಕ್ಷದ ಉಪನಾಯಕ ಗೋವಿಂದರಾಜ್, ಚಿತ್ರನಟರಾದ ನೆನಪಿರಲಿ ಪ್ರೇಮ್, ಸಾಧು ಕೋಕಿಲ, ಎಂಎಲ್‌ಎಸ್. ರವಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಕಾಂಗ್ರೆಸ್‌ ನಾಯಕರು
ಟ್ರಾಫಿಕ್ ಜಾಮ್: ರಾಮನಗರದ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಪಾದಯಾತ್ರೆಗೆ ಚಾಲನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಹೆದ್ದಾರಿ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದೆ. ಮೈಸೂರು ಕಡೆಯಿಂದ ಬರುತ್ತಿರುವ ಬಸ್​ಗಳನ್ನ ಚನ್ನಪಟ್ಟಣದ ಹಲಗೂರು, ಕನಕಪುರ, ಹಾರೋಹಳ್ಳಿ ಮೂಲಕ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಬರುವ ವಾಹನಗಳನ್ನು ಕನಕಪುರ, ಮಳವಳ್ಳಿ ಮೂಲಕ ಮೈಸೂರಿಗೆ ರಸ್ತೆ ಬದಲಾವಣೆ ಮಾಡಲಾಗಿದೆ.
ಭಾನುವಾರ ರಜೆ ಇರೋದ್ರಿಂದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದು, ತುಂಬಾ ಬಿಸಿಲು ಇರುವುದರಿಂದ ತಂಪು ಪಾನೀಯ, ನೀರು, ಹಣ್ಣುಗಳನ್ನು ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ನೀಡಲಾಗುತ್ತಿದೆ. ಪ್ರತಿ ಅರ್ಧ ಕಿ.ಮೀ ಗೂ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ, ಪಾದಯಾತ್ರೆಗೆ ಮಂಡ್ಯದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!