ಹೊಸದಿಗಂತ ವರದಿ,ಕುಶಾಲನಗರ:
ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಬಾಗಲಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಜಿಲ್ಲೆಯ ಕುಶಾಲನಗರ ಫಾತಿಮಾ ಕಾನ್ವೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10 ನೇ ತರಗತಿಯ ಕೆ. ಗಾಯಿತ್ರಿ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ವತಿಯಿಂದ ಬಾಗಲಕೋಟೆಯಲ ಬಸವೇಶ್ವರ ವಿದ್ಯಾವರ್ಧಕ ಸಂಘದ ಎಂ.ಬಿ.ಎ.ಕಾಲೇಜಿನಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ರಾಜ್ಯ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಆಯ್ಕೆಯಾದ ನಾಲ್ವರಲ್ಲಿ ಗಾಯಿತ್ರಿಯೂ ಒಬ್ಬರಾಗಿದ್ದಾರೆ ಎಂದು ಯುವ ವಿಜ್ಞಾನಿ ಸ್ಪರ್ಧೆಯ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ ತಿಳಿಸಿದ್ದಾರೆ.
ಯುವ ವಿಜ್ಞಾನಿ ಪ್ರಶಸ್ತಿ ಪಡೆದಿರುವ ವಿದ್ಯಾರ್ಥಿನಿ ಕೆ. ಗಾಯತ್ರಿ :ಸೋಲಾರ್ ಶಕ್ತಿಯಿಂದ ಪಾರ್ಥೇನಿಯಂ ಗಿಡವನ್ನು ನಿರ್ಮೂಲನೆ’ ಎಂಬ ವಿಷಯದ ಕುರಿತು ವೈಜ್ಞಾನಿಕ ಯೋಜನೆಯನ್ನು ಮಂಡಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ.
ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿನಿ ಕೆ.ಗಾಯಿತ್ರಿಯ ಸಾಧನೆಗೆ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಅಭಿನಂದನೆ ಸಲ್ಲಿಸಿದೆ.
ಗಾಯಿತ್ರಿ ಯು ಕುಶಾಲನಗರ ಪಟ್ಟಣದ ಹೌಸಿಂಗ್ ಬೋರ್ಡ್ ನ ಕೆ.ಕಾರ್ತೀಶನ್ ಮತ್ತು ಶಿಕ್ಷಕಿ ಫ್ಲಾರೆನ್ಸ್ ಕೆ ದಂಪತಿಯ ಪುತ್ರಿಯಾಗಿದ್ದು, ಆಕೆ ಮಂಡಿಸಿದ ಯೋಜನೆಗೆ ಕುಶಾಲನಗರ ಜ್ಞಾನ ಭಾರತಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿಯೂ ಆಗಿರುವ ಆಕೆಯ ತಾಯಿ ಮಾರ್ಗದರ್ಶಿ ಶಿಕ್ಷಕಿ ಫ್ಲಾರೆನ್ಸ್ ಕೆ ಮಾರ್ಗದರ್ಶನ ನೀಡಿದ್ದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ವತಿಯಿಂದ ಈಚೆಗೆ ಮಡಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಗಾಯಿತ್ರಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಗೆ ಆಯ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.