‘ಕೋಟಿ ಗೀತ ಲೇಖನ ಯಜ್ಞ’ಕ್ಕೆ ಸಿದ್ಧತೆ: ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ

ದಿಗಂತ ವರದಿ ಮೈಸೂರು:

`ಉಡುಪಿಯ ಪುತ್ತಿಗೆ ಮಠವು `ಕೋಟಿ ಗೀತ ಲೇಖನ ಯಜ್ಞ’ವನ್ನು ನಡೆಸಲಿದೆ’ ಎಂದು ಮಠದ ಶ್ರೀಗಳಾದ ಸುಗುಣೇಂದ್ರತೀರ್ಥ ಸ್ವಾಮಿ ತಿಳಿಸಿದರು.
ಗುರುವಾರ ಮೈಸೂರಿನ ಜೆಪಿ ನಗರದಲ್ಲಿ ಕೋಟಿ ಗೀತಾ ಲೇಖನ ಯಜ್ಞ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮುಂದಿನ 4ನೇ ಪರ್ಯಾಯದಲ್ಲಿ ಒಂದು ಕೋಟಿ ಜನರಿಂದ ಭಗವದ್ಗೀತೆ ಬರೆಸಿ, ಕೃಷ್ಣನಿಗೆ ಅರ್ಪಿಸಲಾಗುವುದು. ಇದಕ್ಕಾಗಿ ಗೀತಾಮಂದಿರದಿAದಲೇ ಪುಸ್ತಕಗಳನ್ನು ನೀಡಲಾಗುವುದು. 701 ಶ್ಲೋಕಗಳನ್ನು ಬರೆದು ಯಾರ ಹೆಸರಿನಲ್ಲಿ, ಯಾದರೂ ಕೃಷ್ಣನಿಗೆ ಯಾರು ಬೇಕಾದರೂ ಸಮರ್ಪಣೆ ಮಾಡಬಹುದು’ ಎಂದರು.

`ಜಗತ್ತಿನ ಒಂದೆಡೆ ಯುದ್ಧ ನಡೆಯುತ್ತಿದೆ. ನಮ್ಮಲ್ಲೂ ಕೋವಿಡ್‌ನಿಂದ ಹಾಗೂ ವಿಶೇಷವಾಗಿ ಮೊಬೈಲ್‌ನಿಂದ ಅಶಾಂತಿ ಮೂಡಿದೆ. ಈ ಅಶಾಂತಿ ಹೋಗಲಾಡಿಸಿ, ಶಾಂತಿ ಪಡೆಯಲು ಗೀತೆಯಲ್ಲಿ ಉತ್ತರ ಇದೆ. ಗೀತೆಯ ಸಂದೇಶ ಎಲ್ಲರಿಗೂ ತಲುಪಲಿ ಎಂದು ಈ ಕಾರ್ಯ ಮಾಡಲಾಗುತ್ತಿದೆ’ ಎಂದು ಹೇಳಿದರು.
`ಭಕ್ತಿಯ ಜತೆಗೆ ಜ್ಞಾನವೂ ಮುಖ್ಯ. ಜ್ಞಾನ ಇಲ್ಲದ ಭಕ್ತಿ ಅದು ಮೂಢ ಭಕ್ತಿ. ಜ್ಞಾನ ಇಲ್ಲದವರು ನಾಶವಾಗುತ್ತಾರೆ. ಎಲ್ಲರೂ ಜ್ಞಾನಿಗಳಾಗಬೇಕು. ಜ್ಞಾನದ ಮೂಲಕ ಕೃಷ್ಣನನ್ನು ಪೂಜಿಸಿದರೆ ಅದು ಆತನಿಗೆ ಪ್ರಿಯ. ಕೃಷ್ಣನೇ ತನಗೆ ಇಷ್ಟವಾದದ್ದು ಜ್ಞಾನ ಎಂದು ಭಗವದ್ಗೀತೆಯಲ್ಲಿ ಹೇಳಿದ್ದಾನೆ’ ಎಂದರು.
`ಕೃಷ್ಣನ ಪೂಜೆ ಎಂದರೆ ಕೇವಲ ಪೂಜೆ, ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಮಾತ್ರವೇ ಅಲ್ಲ. ನಾವು ಮಾಡುವ ಎಲ್ಲ ಕೆಲಸವನ್ನೂ ಪೂಜೆಯಂತೆ ನಿಷ್ಠೆಯಿಂದ, ನಿಸ್ವಾರ್ಥದಿಂದ, ಪ್ರಾಮಾಣಿಕವಾಗಿ ಮಾಡಿದರೆ, ಅದೂ ಕೃಷ್ಣನಿಗೆ ಅರ್ಪಣೆಯಾಗುತ್ತದೆ. ಅದೂ ದೇವರ ಪೂಜೆ ಎನಿಸಿಕೊಳ್ಳುತ್ತದೆ. ಅದರಿಂದಲೂ ಸಿದ್ಧಿ ದೊರಕುತ್ತದೆ’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸುಬ್ರಹ್ಮಣ್ಯ ಆರ್ ತಂತ್ರಿ ,ಎಸ್ ಬಿ ವಾಸುದೇವ್ ಮೂರ್ತಿ ,ಶೇಷಾದ್ರಿ ಹಾಗೂ ಇನ್ನಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!