ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ಜೊತೆ ದೂರವಾಣಿ ಮೂಲಕ ಮಾತಾಡಿದ ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದೂರವಾಣಿ ಮೂಲಕ ಮಾತನಾಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.

ತಮ್ಮ ಪರಿಸ್ಥಿತಿಯನ್ನು ವಿವರಿಸಿದ ವಿದ್ಯಾರ್ಥಿಗಳು, ‘ಖಾರ್ಕೀವ್ ನಿಂದ 30 ಕಿ‌.ಮೀ. ದೂರದ ಪ್ರದೇಶಕ್ಕೆ ನಾವು ನಡೆದುಕೊಂಡು ಬಂದಿದ್ದೇವೆ. ಸದ್ಯಕ್ಕೆ ನಾವು ಸುರಕ್ಷಿತವಾಗಿ ಇದ್ದೇವೆ’ ಎಂದು ಮುಖ್ಯ ಮಂತ್ರಿಗಳಿಗೆ ತಿಳಿಸಿದರು.

ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಮುಖ್ಯಮಂತ್ರಿಗಳು, ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ಕರ್ನಾಟಕ ಸರಕಾರ ನಿರಂತರವಾಗಿ ಸಂಪರ್ಕದಲ್ಲಿದೆ. ನಿಮಗೆ ಎಲ್ಲ ರೀತಿಯ ಸಹಕಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ನಿಮ್ಮನ್ನು ಅಲ್ಲಿಂದ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸರ್ವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಅಂದಾಜು 200 ಜನ ರಾಜ್ಯದ ವಿದ್ಯಾರ್ಥಿಗಳು ಖಾರ್ಕಿವ್ ನಲ್ಲಿ ಇದ್ದಾರೆ. ಗಗನಗೌಡ ಎಂಬ ಬೆಂಗಳೂರಿನ ಮೂಲದ ವಿದ್ಯಾರ್ಥಿ ಸೇರಿದಂತೆ ಇತರೆ ವಿದ್ಯಾರ್ಥಿಗಳ ಜೊತೆ ಸಿಎಂ ಮಾತನಾಡಿದರು.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!