ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಆರ್‌ಎಸ್‌ಎಸ್‌ನಿಂದ ಬಂದವರು, ಈ ಥರ ಬಜೆಟ್ ಮಂಡಿಸಿದರೆ ನನಗೆ ಅಂಥ ಆಘಾತ ಆಗಲ್ಲ. ಆದರೆ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದರಲ್ಲ ಎಂಬುದು ವಿಷಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ 2022-23ನೇ ಸಾಲಿನ ಆಯವ್ಯಯದ ಮೇಲೆ ಸಿದ್ದರಾಮಯ್ಯ ಚರ್ಚೆ ನಡೆಸಿದರು.
ಸಿದ್ದರಾಮಯ್ಯ ಅವರು, ನಾನು ನಿರೀಕ್ಷೆ ಹೆಚ್ಚು ಮಾಡಿದ್ದೆ. ಯಡಿಯೂರಪ್ಪ ಅವರ ದಾರಿ ಬಿಟ್ಟು ಬೇರೆ ದಾರಿಯಲ್ಲಿ ಹೋಗುತ್ತಾರೆ ಎಂದು ಲೆಕ್ಕ ಹಾಕಿದ್ದೆ. ಯಡಿಯೂರಪ್ಪನವರು ಬಂದ ದಾರಿಯೇ ಬೇರೆ. ಅವರು ಆರ್‌ಎಸ್‌ಎಸ್, ಬಿಜೆಪಿ. ಕೋಪಗೊಂಡು ಸ್ವಲ್ಪ ದಿನ ಹೊರಗಡೆ ಹೋಗಿದ್ರು ಅದು ಬೇರೆ ವಿಚಾರ. ಅವರ ಮೇಲೆ ಬಿಜೆಪಿ, ಆರ್‌ಎಸ್‌ಎಸ್ ಸಿದ್ದಾಂತದ ಪ್ರಭಾವ ಇದೆ. ಬಸವರಾಜ ಬೊಮ್ಮಾಯಿ ಅವರು ಹಾಗೇನಿಲ್ಲ. ನಾನು ಕಾಂಗ್ರೆಸ್ಸಿಗೆ ಹೋದ ಎರಡು ವರ್ಷದ ನಂತರ 2008ರಲ್ಲಿ ಬಿಜೆಪಿಗೆ ಹೋದವರು. ಹಾಗಾಗಿ ತಂದೆ ಎಸ್.ಆರ್. ಬೊಮ್ಮಾಯಿ ಅವರ ಪ್ರಭಾವ ಇದೆ ಎಂದು ಭಾವಿಸಿದ್ದೆ. ಆದರೆ ಬಜೆಟ್ ನೋಡಿದ ಮೇಲೆ ಆ ಪ್ರಭಾವ ಆರ್‌ಎಸ್‌ಎಸ್ ಪ್ರಭಾವದ ಮುಂದೆ ಸೋತು ಬಿಟ್ಟಿದೆ ಎಂದು ಅನಿಸಿದೆ ಎಂದು ಹೇಳಿದರು.
ಸಂಸ್ಕಾರ ಕಲಿಸುತ್ತದೆ ಆರ್‌ಎಸ್‌ಎಸ್
ಈ ವೇಳೆ ಸಚಿವ ಆರ್. ಅಶೋಕ್ ಮಾತನಾಡಿ, ಯಡಿಯೂರಪ್ಪ, ನಾವೆಲ್ಲ ಆರ್‌ಎಸ್‌ಎಸ್‌ನವರು ಬಹಳ ಜನ ಇದ್ದಾರೆ. ನಮಗಿಂತ ಹೆಚ್ಚು ಆರ್‌ಎಸ್‌ಎಸ್ ಬೊಮ್ಮಾಯಿ ಅವರು ಆಗಿದ್ದಾರೆ. ಒಳ್ಳೆಯದು ಮಾಡುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನೀವು ಹೇಳುವುದು ಅಕ್ಷರಶಃ ಸತ್ಯ, ನೀವು ಹೇಳಿದ್ದನ್ನೇ ನಾನು ಹೇಳೋಕೆ ಬಂದೆ ಎಂದರು.
ಮತ್ತೆ ಮಾತು ಮುಂದುವರಿಸಿದ ಸಚಿವ ಅಶೋಕ್, ಆರ್‌ಎಸ್‌ಎಸ್ ಅಂದ್ರೆ ರಾಜಕೀಯ ಸಂಸ್ಥೆ ಅಲ್ಲ. ಅದು ಸಂಸ್ಕಾರ ಕೊಡುವಂತಹದ್ದು, ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ಅಲ್ಲಿಂದ ಬಂದಿದ್ದಾರೆ ಅಂದ್ರೆ ಬೊಮ್ಮಾಯಿಯವರು ಒಳ್ಳೆಯ ಬಜೆಟ್ ಮಾಡಿದ್ದಾರೆ ಎಂದರ್ಥ ಎಂದು ಹೇಳಿದರು.
ಜನತಾದಳದಿಂದ ಬಂದವರು ಸಿಎಂ ಆದರು
ಆರ್‌ಎಸ್‌ಎಸ್‌ನಿಂದ ಬಂದವರು, ಈ ಥರ ಬಜೆಟ್ ಮಂಡಿಸಿದರೆ ನನಗೆ ಅಂಥ ಆಘಾತ ಆಗಲ್ಲ. ಬಸವರಾಜ ಬೊಮ್ಮಾಯಿ ಅವರು ಮಂಡಿಸಿದರಲ್ಲ ಅಂತ ಈ ಮಾತುಗಳನ್ನು ಹೇಳುತ್ತಿದ್ದೇನೆ. 2008ರವರೆಗೆ ಅವರಿಗೆ ಆರ್‌ಎಸ್‌ಎಸ್, ಬಿಜೆಪಿ ಸಂಪರ್ಕ ಇರಲಿಲ್ಲ. ಆ ನಂತರ ಬಿಜೆಪಿಗೆ ಹೋಗಿ ಜಲಸಂಪನ್ಮೂಲ ಸಚಿವರು, ಗೃಹಸಚಿವರು, ಮತ್ತೀಗ ಮುಖ್ಯಮಂತ್ರಿಯಾಗಿದ್ದಾರೆ. ಆರ್‌ಎಸ್‌ಎಸ್ ಮೂಲದಿಂದ ಬಂದಿರುವ ಈಶ್ವರಪ್ಪ, ನಿಮಗೆ ಆಗಲಿ ಯಾರಿಗೂ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ. ಇವರಿಗೆ ಸಿಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಆಗ ಎದ್ದು ನಿಂತ ಸಚಿವ ಅಶೋಕ್, ಜನತಾದಳದಿಂದ ಬಂದಿರುವ ನೀವು ಮುಖ್ಯಮಂತ್ರಿ ಆಗಲಿಲ್ವ? ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್‌ನ ದೇಶಪಾಂಡೆ, ರಾಮಲಿಂಗ ರೆಡ್ಡಿ ಇವರ ಹೆಸರು ಹೇಳಿದ್ರಾ? ಇಲ್ಲ. ಅವಕಾಶ ಸಿಕ್ಕಿದೆ ಆಗಿದೆ. ಜನ ಹಾಗೂ ಭಗವಂತನ ಆಶೀರ್ವಾದ. ನಮಗಿಂತ ಚೆಂದ ಬಿಜೆಪಿ ಪಾಲಿಸಿ ಅನುಷ್ಠಾನಿಸುತ್ತಾರೆ ಅಂದ್ರೆ ಅದು ಬೊಮ್ಮಾಯಿ ಅವರೇ. ನಾವೆಲ್ಲ ಇನ್ನೂ ಒಂದು ಹೆಜ್ಜೆ ಹಿಂದೆ ಇದ್ದೇವೆ ಎಂದು ಹೇಳಿದರು.