ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮೇಲೆ ರಷ್ಯಾ ಅಪ್ರಚೋದಿತ ದಾಳಿ ಶುರು ಮಾಡಿ 12 ದಿನಗಳು ಕಳೆದರು, ರಷ್ಯಾಧ್ಯಕ್ಷ ಪುಟಿನ್ ಮಾತ್ರ ಯುದ್ಧ ನಿಲ್ಲಿಸುವಂತೆ ಕಾಣುತ್ತಿಲ್ಲ. ಉಕ್ರೇನ್ ಮೇಲಿನ ಯುದ್ಧದ ನಡುವೆಯೇ ಪುಟಿನ್ ತಮ್ಮ ಶತ್ರು ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಸಾವಿರಾರು ಸಂಸ್ಥೆಗಳು ರಷ್ಯಾ ಮೇಲೆ ನಿರ್ಬಂಧನೆಗಳನ್ನು ಹೇರುತ್ತಿವೆ. ಆದರೆ ಇದಕ್ಕೆಲ್ಲಾ ಕೊವಿಗೊಡದ ರಷ್ಯಾ ಯುದ್ಧ ಮುಂದುವರೆಸುತ್ತಲೇ ತನ್ನ ಶತ್ರು ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಎಲ್ಲೆಡೆ ಸಂಚಲನ ಸೃಷ್ಟಿಸಿದೆ.
ಯಾವೆಲ್ಲಾ ರಾಷ್ಟ್ರಗಳಿಗೆ ರಷ್ಯಾದ ಶತ್ರುತ್ವದ ಬ್ಯಾಡ್ಜ್?
ಬ್ರಿಟನ್, ಅಮೆರಿಕ ಸೇರಿ ಸುಮಾರು 31 ರಾಷ್ಟ್ರಗಳು ಈ ಪಟ್ಟಿಯಲ್ಲಿದೆ. ಉಕ್ರೇನ್, ಜಪಾನ್ ಸೇರಿ ಐರೋಪ್ಯ ರಾಷ್ಟ್ರಗಳನ್ನು ಪರಮ ಶತ್ರುಗಳು ಎಂದು ರಷ್ಯಾ ಹೇಳಿಕೊಂಡಿದೆ. ಇನ್ನುಳಿದಂತೆ ಯುರೋಪಿಯನ್ ಒಕ್ಕೂಟದ 27 ದೇಶಗಳಿಗೂ ಶತ್ರು ಪಟ್ಟ ನೀಡಲಾಗಿದೆ. , ಮೊನಾಕೊ, ನಾರ್ವೆ, ಸ್ಯಾನ್ ಮರಿನೋ, ಉತ್ತರ ಮೆಸಿಡೋನಿಯಾ, ಮಾಂಟೆನೆಗ್ರೊ, ಸ್ವಿಜರ್ಲ್ಯಾಂಡ್, ಅಲ್ಬೇನಿಯಾ, ಅಂಡೋರಾ, ಐಸ್ಲ್ಯಾಂಡ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಮೈಕ್ರೋನೇಷಿಯಾ, ನ್ಯೂಜಿಲೆಂಡ್, ಸಿಂಗಾಪುರ ಗಳನ್ನು ಕೂಡ ಶತ್ರು ರಾಷ್ಟ್ರ ಎಂದು ರಷ್ಯಾ ಘೋಷಿಸಿದೆ.
ಏಕೆ ಈ ಶತ್ರು ರಾಷ್ಟ್ರಗಳ ಪಟ್ಟಿ?
ಉಕ್ರೇನ್ ಮೇಲಿನ ದಾಳಿ ಖಂಡಿಸಿ ವಿಶ್ವದ ಬಹುತೇಕ ರಾಷ್ಟ್ರಗಳು ರಷ್ಯಾ ವಿರುದ್ಧ ಸಾಕಷ್ಟು ನಿರ್ಬಂಧನೆಗಳನ್ನು ಹೇರಿವೆ. ಈ ವೇಳೆ ಉಕ್ರೇನ್ ಹಾಗೂ ರಷ್ಯಾ ನಡುವಿನ ಈ ಯುದ್ಧದ ವಿಚಾರದಲ್ಲಿ ಯಾರಾದರೂ ಮಧ್ಯಪ್ರವೇಶಿಸಿದರೆ ಯುದ್ದ ಉಕ್ರೇನ್ ನ ಗಡಿ ದಾಟಿಯೂ ನಡೆಯಬಹುದು ಎಂದು ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಸಿದ್ದರು. ಇದೀಗ ಈ ಶತ್ರು ರಾಷ್ಟ್ರಗಳ ಪಟ್ಟಿ ಮೂಲಕ ಭಾರತ, ಚೀನಾದಂತಹ ಮಿತ್ರ ರಾಷ್ಟ್ರಗಳಿಗೂ ಪರೋಕ್ಷ ಸಂದೇಶ ರವಾನಿಸಿದೆ.
ಅಮೆರಿಕ ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ತನ್ನ ಸಚಿವರನ್ನು ಅಮೆರಿಕಕ್ಕೆ ಬರದಂತೆ ನಿಷೇಧ ಹೇರಿದೆ. ಇನ್ನು ಅಮೆರಿಕದ ಬ್ಯಾಂಕ್ ಗಳು, ವೀಸಾ ಕಾರ್ಡ್ ಗಳು, ಫೇಸ್ ಬುಕ್, ಟ್ವಿಟರ್ ನಂತಹ ದೈತ್ಯ ಸಂಸ್ಥೆಗಳು ರಷ್ಯಾದೊಂದಿಗೆ ತನ್ನ ವ್ಯವಹಾರಗಳನ್ನು ನಿಷೇಧಿಸಿದೆ.