ಹೊಸದಿಗಂತ ಡಿಜಿಟಲ್ ಡೆಸ್ಕ್
ಹೊಸದಿಲ್ಲಿ: ಕೃಷಿ ಉತ್ಪನ್ನಗಳ ರಫ್ತು ಉತ್ತೇಜನ ನಿರಂತರ ಪ್ರಕ್ರಿಯೆ. ಉಕ್ರೇನ್-ರಷ್ಯ ಯುದ್ಧ ಆರಂಭವಾದ ನಂತರ ಭಾರತದ ಅನೇಕ ಕೃಷಿ ಉತ್ಪನ್ನಗಳಿಗೆ ವಿದೇಶದಿಂದ ಬೇಡಿಕೆಯೂ ಬಂದಿದ್ದು, ರಫ್ತು ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದಕ್ಕೂ ಮುನ್ನ ಕೇಂದ್ರ ಸರಕಾರ ಕೃಷಿ ಉತ್ಪನ್ನಗಳ ರಫ್ತಿಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಅದೀಗ ಪ್ರಯೋಜನಕ್ಕೆ ಬಂದಿವೆ.
ತಾವು ಬೆಳೆದ ಬೆಳೆಗಳನ್ನು ಎಲ್ಲಿ, ಹೇಗೆ ರಫ್ತು ಮಾಡಬೇಕೆಂದು ರೈತರಿಗೆ ತಿಳಿಯದೇ ಇರಬಹುದು. ಅದಕ್ಕಾಗಿ ಮತ್ತು ರೈತರಿಗೆ ವೇದಿಕೆ ಒದಗಿಸಲು ಫಾರ್ಮರ್ ಕನೆಕ್ಟ್ ಪೋರ್ಟಲ್ಗಳನ್ನು ಸ್ಥಾಪಿಸಲಾಗಿದೆ. ರಫ್ತುದಾರರೊಂದಿಗೆ ರೈತ-ಉತ್ಪಾದಕರ ಸಂಸ್ಥೆಗಳು (ಎಫ್.ಪಿ.ಒ.ಗಳು) ಮತ್ತು ಸಹಕಾರಿ ಸಂಸ್ಥೆಗಳು ಸಂಪರ್ಕ ಸಾಧಿಸಿ, ಸಂವಹನ ನಡೆಸುತ್ತವೆ. ರಫ್ತು-ಮಾರುಕಟ್ಟೆ ಸಂಪರ್ಕ ಒದಗಿಸಲು ಕ್ಲಸ್ಟರ್ಗಳಲ್ಲಿ ಖರೀದಿದಾರ-ಮಾರಾಟಗಾರರ ಸಭೆಗಳನ್ನು (ಬಿಎಸ್ಎಂ) ಆಯೋಜಿಸಲಾಗಿದೆ. ರಫ್ತು ಅವಕಾಶಗಳನ್ನು ನಿರ್ಣಯಿಸಲು ಮತ್ತು ಬಳಸಿಕೊಳ್ಳಲು ವಿದೇಶದಲ್ಲಿರುವ ಭಾರತೀಯ ಮಿಷನ್ಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ಗಳ ಮೂಲಕ ನಿಯಮಿತ ಸಂವಾದಗಳನ್ನೂ ನಡೆಸಲಾಗಿದೆ.
ಕೃಷಿ ರಫ್ತುಗಳನ್ನು ಉತ್ತೇಜಿಸಲು ಕೇಂದ್ರ ಸರಕಾರವು ರಾಜ್ಯ/ಜಿಲ್ಲಾ ಮಟ್ಟದಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಕೆಲವು ರಾಜ್ಯಗಳಿಂದ ‘ರಾಜ್ಯ ನಿರ್ದಿಷ್ಟ ಕ್ರಿಯಾ ಯೋಜನೆ’ಗಳು ಸಿದ್ಧಗೊಂಡಿವೆ. ಅಲ್ಲದೇ ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಗಳು (ಎಸ್ಎಲ್ಎಂಸಿ), ಕೃಷಿ ರಫ್ತಿಗಾಗಿ ನೋಡಲ್ ಏಜೆನ್ಸಿಗಳು ಮತ್ತು ಹಲವಾರು ರಾಜ್ಯಗಳಲ್ಲಿ ಕ್ಲಸ್ಟರ್ ಮಟ್ಟದ ಸಮಿತಿಗಳೂ ರಚನೆಗೊಂಡಿವೆ. ರಫ್ತುಗಳನ್ನು ಉತ್ತೇಜಿಸಲು ದೇಶ ಮತ್ತು ಉತ್ಪನ್ನ-ನಿರ್ದಿಷ್ಟ ಕ್ರಿಯಾ ಯೋಜನೆಗಳು ಸಹ ರೂಪುಗೊಂಡಿವೆ. ಕೃಷಿ ರಫ್ತು ನೀತಿಯ ಉದ್ದೇಶಗಳನ್ನು ಪೂರೈಸಲು ವಾಣಿಜ್ಯ ಇಲಾಖೆಯ ’ರಫ್ತು ಹಬ್ ಆಗಿ ಜಿಲ್ಲೆ’ ಉಪಕ್ರಮದಡಿಯಲ್ಲಿ ರಚಿಸಿದ ಸಂಸ್ಥೆಗಳನ್ನೂ ಬಳಸಿಕೊಳ್ಳಲಾಗುತ್ತದೆ. ಕೃಷಿ ಉತ್ಪನ್ನಗಳ ರಫ್ತಿಗೆ ಸರಕು ಸಾಗಣೆ ಅನಾನುಕೂಲತೆ ತಗ್ಗಿಸಲು ಸರಕು ಸಾಗಣೆಯ ಅಂತಾರಾಷ್ಟ್ರೀಯ ಘಟಕಕ್ಕೆ ನೆರವು ನೀಡಲು ಸರಕಾರವು ಕೇಂದ್ರ ವಲಯದ ಯೋಜನೆ-ನಿರ್ದಿಷ್ಟ ಕೃಷಿ ಉತ್ಪನ್ನಗಳಿಗೆ ಸಾರಿಗೆ ಮತ್ತು ಮಾರುಕಟ್ಟೆ ಸಹಾಯವನ್ನೂ ಪರಿಚಯಿಸಿದೆ.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಒತ್ತಾಯದ ಮೇರೆಗೆ ಎಂಟು ಹೆಚ್ಚಿನ ಸಂಭಾವ್ಯ ಕೃಷಿ ಉತ್ಪನ್ನಗಳಾದ ದ್ರಾಕ್ಷಿ, ಮಾವು, ಬಾಳೆ, ಈರುಳ್ಳಿ, ಅಕ್ಕಿ, ಪೌಷ್ಠಿಕ-ಧಾನ್ಯಗಳು, ದಾಳಿಂಬೆ, ಪುಷ್ಪಕೃಷಿ ಮತ್ತು ಸಸ್ಯಜನ್ಯ ವಸ್ತುಗಳಿಗೆ ಉತ್ಪನ್ನ ನಿರ್ದಿಷ್ಟ ರಫ್ತು ಪ್ರಚಾರ ವೇದಿಕೆ (ಇಪಿಎಫ್)ಗಳನ್ನು ರಚಿಸಲಾಗಿದೆ. ಅಗ್ರಿಕಲ್ಚರ್ ಆ್ಯಂಡ್ ಪ್ರೊಸೆಸ್ಡ್ ಫುಡ್ ಪ್ರಾಡಕ್ಟ್ಸ್ ಎಕ್ಸ್ಪೊರ್ಟ್ ಡೆವೆಲಪ್ಮೆಂಟ್ ಅಥಾರಿಟಿ (ಎಪಿಇಡಿಎ) ಆಶ್ರಯದಲ್ಲಿ ಗುರುತಿಸಲ್ಪಟ್ಟ ಉತ್ಪನ್ನಗಳ ರಫ್ತನ್ನು ಕೇಂದ್ರೀಕೃತ ರೀತಿಯಲ್ಲಿ ಉತ್ತೇಜಿಸುವ ಕೆಲಸವೂ ನಡೆಯುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ