ಹೊಸದಿಗಂತ ಡಿಜಿಟಲ್ ಡೆಸ್ಕ್
ಬಿಜೆಪಿ ಯುವ ಘಟಕದ ಮಾಜಿ ಕಾರ್ಯದರ್ಶಿ ಮತ್ತು ವಕೀಲ ಗೌರವ್ ಜೈಸ್ವಾಲ್ (35) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ದುಷ್ಕರ್ಮಿಗಳು ಜೈಸ್ವಾಲ್ ಅವರ ತಲೆಗೆ ಗುಂಡಿಕ್ಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪರಿಚಿತ ದಾಳಿಕೋರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಗೌರವ್ ಜೈಸ್ವಾಲ್ ಅವರು ಮಹಾರಾಜ್‌ಗಂಜ್ ಪುರಸಭೆಯ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್ ಅವರ ಸೋದರಳಿಯನಾಗಿದ್ದು, ಪ್ರತಿಷ್ಠಿತ ಜೈಸ್ವಾಲ್ ಕುಟುಂಬಕ್ಕೆ ಸೇರಿದವರು. ಅವರು ಸಕ್ರಿಯ ಬಿಜೆಪಿ ಕಾರ್ಯಕರ್ತ ಮತ್ತು ಪಕ್ಷದ ಸ್ವಚ್ಛತಾ ಅಭಿಯಾನದ ಸಹ ಸಂಚಾಲಕರಾಗಿದ್ದರು. ಜೈಸ್ವಾಲ್ ಅವರ ಸಾವಿನಿಂದ ಮಹಾರಾಜ್‌ಗಂಜ್ ನಲ್ಲಿ ಬಿಗುವಿನ ವಆತಾವರಣ ನಿರ್ಮಾಣವಾಗಿದ್ದು, ಬಿಜೆಪಿ ಕಾರ್ಯಕರ್ತರು ಆರೋಪಿಗಳ ಪತ್ತೆಗೆ ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಮಹಾರಾಜ್‌ಗಂಜ್ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಪ್ತಾ ಮಾಹಿತಿ ನೀಡಿದ್ದು, ಜೈಸ್ವಾಲ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಚಿಯುರಾಹಾ ಕ್ರಾಸಿಂಗ್ ಬಳಿಯ ಬಿರಿಯಾನಿ ಅಂಗಡಿಯಲ್ಲಿ ಜೈಸ್ವಾಲ್ ಕುಳಿತಿದ್ದಾಗ ಘಟನೆ ಸಂಭವಿಸಿದೆ. ಯಾವುದೋ ವಿಚಾರಕ್ಕೆ ವಾಗ್ವಾದ ತೆಗೆದ ದುಷ್ಕರ್ಮಿಗಳು ಜೈಸ್ವಾಲ್‌ನನ್ನು ಗುಂಟಿಟ್ಟು ಕೊಂದಿದ್ದಾರೆ. ಜೈಸ್ವಾಲ್ ಅವರನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಜೈಸ್ವಾಲ್ ಅಪರಿಚಿತ ನಂಬರ್ ನಿಂದ ಕರೆ ಸ್ವೀಕರಿಸಿದ ನಂತರ ಮನೆಯಿಂದ ಹೊರಬಿದ್ದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಜೈಸ್ವಾಲ್ ಅವರು ಯಾರೊಂದಿಗೂ ದ್ವೇಷ ವೈಮನಸ್ಸು ಹೊಂದಿರಲಿಲ್ಲ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಆದರೂ ಪೂರ್ವಯೋಜಿತ ರೀತಿಯಲ್ಲಿ ಕೊಲೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದು (ಎಸ್‌ಪಿ) ಪ್ರದೀಪ್ ಗುಪ್ತಾ ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ