ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ರತಾಪಗಢ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸುಮ್ ಸುಮ್ನೆ ‘ಬುಲ್ಡೋಜರ್ ವಾಲೆ ಬಾಬಾ’ ಅಂತ ಕರೆಯಲ್ಲ, ಯೋಗಿಯ ಬುಲ್ಡೋಜರ್ ಭಯ ಪ್ರತಾಪಗಢ ಜಿಲ್ಲೆಯಲ್ಲಿ ಅತ್ಯಾಚಾರ ಆರೋಪಿಯೊಬ್ಬ ಶರಣಾಗುವಂತೆ ಮಾಡಿದೆ.
ವರದಿಗಳ ಪ್ರಕಾರ, ಅತ್ಯಾಚಾರ ಆರೋಪಿ ತಲೆಮರೆಸಿಕೊಂಡಿದ್ದು, ಯುಪಿ ಪೊಲೀಸರಿಗೆ ಆತನ ಇರುವಿಕೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ತಲೆಮರೆಸಿಕೊಂಡಿದ್ದ ಆತನನ್ನು ಬಂಧಿಸಲು ಪೊಲೀಸರು ಆತನ ಮನೆಯ ಹೊರಗೆ ಬುಲ್ಡೋಜರ್ ಅನ್ನು ನಿಲ್ಲಿಸಿದರು.
ಪ್ರತಾಪ್‌ಗಢದ ರೈಲ್ವೆ ನಿಲ್ದಾಣದ ಬಳಿ ಶೌಚಾಲಯ ನಡೆಸುತ್ತಿದ್ದ ಆರೋಪಿ ಶುಭಂ, ಶೌಚಾಲಯದಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಸಂತ್ರಸ್ತೆ ಪ್ರಯಾಗ್‌ರಾಜ್‌ನಿಂದ ಅಹಮದಾಬಾದ್‌ಗೆ ಹೋಗಲು ರೈಲನ್ನು ಹತ್ತಬೇಕಿತ್ತು. ಅವಳು ತನ್ನ ಪತಿ ಮತ್ತು ಇನ್ನೊಬ್ಬರೊಂದಿಗೆ ಪ್ರಯಾಗ್‌ರಾಜ್‌ಗೆ ರೈಲು ಹಿಡಿಯಲು ಮಾ. 18ರಂದು ಪ್ರತಾಪ್‌ಗಢ ರೈಲು ನಿಲ್ದಾಣಕ್ಕೆ ಬಂದಾಗ, ಶೌಚಾಲಯಕ್ಕೆ ಹೋದಳು. ಆಕೆಯನ್ನು ಹಿಂಬಾಲಿಸಿದ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆ ತನ್ನ ಪತಿಗೆ ಘಟನೆಯನ್ನು ವಿವರಿಸಿದ್ದು, ಪತಿ ಆರೋಪಿಯನ್ನು ಹಿಡಿದಿದ್ದಾನೆ. ಆದರೆ, ಆರೋಪಿಗಳ ಸಹಚರರು ಸ್ಥಳಕ್ಕೆ ಬಂದು ಸಂತ್ರಸ್ತೆಯ ಪತಿಗೆ ಥಳಿಸಿ, ಓಡಿ ಹೋಗಿದ್ದಾರೆ.
ಸಂತ್ರಸ್ತೆ ಮನೆಗೆ ಹಿಂತಿರುಗಿ ಅತ್ಯಾಚಾರಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ದೃಢಪಟ್ಟಿದೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಪತ್ತೆಗೆ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಆದರೆ ಆರೋಪಿಯ ಸುಳಿವು ಸಿಗದೇ ಅಂತಿಮವಾಗಿ ಆರೋಪಿಯ ಮನೆ ಮುಂದೆ ಬುಲ್ಡೋಜರ್ ಅನ್ನು ನಿಲ್ಲಿಸಿದ್ದಾರೆ. 24 ತಾಸುಗಳಲ್ಲಿ ಶರಣಾಗದಿದ್ದರೆ ಮನೆ ಕೆಡವುವುದಾಗಿ ಕುಟುಂಬ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಯ ನಂತರ ಆರೋಪಿ ಶುಭಂ ಅಡಗಿಕೊಂಡಿದ್ಧ ಸ್ಥಳದ ಮಾಹಿತಿ ಪಡೆದ ಪೊಲೀಸರು, ಆತನನ್ನು ಬಂಧಿಸಿದ್ದಾರೆ.
ನಿಯಮಗಳ ಪ್ರಕಾರ, ಆಡಳಿತವು ಎರಡು ಪ್ರಕರಣಗಳಲ್ಲಿ ಕಟ್ಟಡಗಳನ್ನು ನೆಲಸಮ ಮಾಡುವ ಅಧಿಕಾರವನ್ನು ಹೊಂದಿದೆ. ಮೊದಲನೆಯದಾಗಿ ನಿರ್ಮಾಣವು ಅಕ್ರಮವಾಗಿದ್ದರೆ ಮತ್ತು ಎರಡನೆಯದು ಅಕ್ರಮ ಚಟುವಟಿಕೆಗಳ ಮೂಲಕ ಗಳಿಸಿದ ಹಣವನ್ನು ಬಳಸಿ ನಿರ್ಮಿಸಿದ ಅಪರಾಧಿಗೆ ಸೇರಿದ್ದರೆ ಕಟ್ಟಡ ಕೆಡವಬಹುದಾಗಿದೆ. ವರದಿಯ ಪ್ರಕಾರ, ಆರೋಪಿಯೊಬ್ಬನನ್ನು ಅಡಗುತಾಣದಿಂದ ಹೊರಬಂದು ಶರಣಾಗುವಂತೆ ಮಾಡಲು ಪೊಲೀಸರು ಬುಲ್ಡೋಜರ್ ಅನ್ನು ಬಳಸಿದ್ದು ಇದೇ ಮೊದಲು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ