ಹೊಸದಿಗಂತ ವರದಿ, ಶಿವಮೊಗ್ಗ:
ತೀರ್ಥಹಳ್ಳಿ ತಾಲೂಕಿನಲ್ಲಿ ಉಪಟಳ ನೀಡುತ್ತಾ ರೈತರ ಆಕ್ರೋಶಕ್ಕೆ ಕಾರಣವಾಗಿದ್ದ ಕಾಡಾನೆಗಳನ್ನು ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಅಟ್ಟುವಲ್ಲಿ ಸಕ್ರೆಬೈಲು ಆನೆಗಳು ಯಶಸ್ಸು ಕಂಡಿವೆ.
ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸಮೀಪದ ಕೀಗಡಿ ಬಳಿ ಕಾಡಾನೆಗಳು ದಾಳಿ ಮಾಡಿ ರೈತರ ಫಸಲನ್ನು ನಾಶ ಮಾಡಿದ್ದವು. ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಖುದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಾಡಾನೆಗಳನ್ನು ಕಾಡಿಗೆ ಓಡಿಸಲು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದರು.
ಅದಕ್ಕೂ ಮೊದಲೇ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಕಾಡಾನೆಗಳ ಪತ್ತೆಗೆ ಸಕ್ರೆಬೈಲು ಆನೆಗಳನ್ನು ಬಳಸಿಕೊಂಡು ಪತ್ತೆ ಕಾರ್ಯಾಚರಣೆ ಕೈಗೊಂಡಿತ್ತು. ಆದರೆ ಕಾಡಾನೆಗಳ ಇರುವಿಕೆ ಪತ್ತೆ ಆಗಿರಲಿಲ್ಲ. ಅದಕ್ಕೂ ಮೊದಲು ಹೊಸನಗರ ತಾಲೂಕು ತಳಲೆ ಹಿನ್ನೀರು ಪ್ರದೇಶದಲ್ಲಿ ಕಾಣಿಸಿದ್ದ ಕಾಡಾನೆಗಳನ್ನು ಅಟ್ಟಿಸಿಕೊಂಡು ಬರಲಾಗಿತ್ತು.
ಆನೆಸರ ಪ್ರದೇಶಕ್ಕೆ …
ಕೀಗಡಿ ಸುತ್ತಮುತ್ತ ನಾಲ್ಕೈದು ದಿನ ಕಾರ್ಯಾಚರಣೆ ನಡೆಸಿದರೂ ಕಾಡಾನೆಗಳು ಪತ್ತೆ ಆಗಿರಲಿಲ್ಲ. ಈಗ ಐದು ದಿನಗಳ ಹಿಂದೆ ಎರಡು ಕಾಡಾನೆಗಳ ಇರುವಿಕೆ ಕಂಡುಬಂದಿತ್ತು. ಅವುಗಳನ್ನು ಇದೀಗ ಮಲೆಶಂಕರ ವ್ಯಾಪ್ತಿಯ ಆನೆಸರ ಪ್ರದೇಶಕ್ಕೆ ಅಟ್ಟಲಾಗಿದೆ. ಇಲ್ಲಿ ಬಿದಿರು ಸೊಪ್ಪು ಹೇರಳವಾಗಿದ್ದು, ಕಾಡಾನೆಗಳ ಆಹಾರಕ್ಕೆ ಕೊರತೆ ಆಗಲಾರದು ಎಂದು ಭಾವಿಸಲಾಗಿದೆ.
ಹಾಗಾಗಿ ಸದ್ಯ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಆದರೆ ಕಾಡಾನೆಗಳ ಚಲನ ವಲನದ ಮೇಲೆ ನಿಗಾ ಇಡಲಾಗಿದೆ. ಮತ್ತೊಮ್ಮೆ ಇವು ಜನವಸತಿ ಪ್ರದೇಶದ ಕಡೆ ಸಂಚಾರ ಬೆಳೆಸಿದರೆ ಅವುಗಳನ್ನು ಸೆರೆ ಹಿಡಿಯುವ ಬಗ್ಗೆ ಆಲೋಚಿಸಬೇಕಾಗುತ್ತದೆ ಸಕ್ರೆಬೈಲು ವನ್ಯಜೀವಿ ವಿಭಾಗದ ಎಸಿಎಫ್ ಸುರೇಶ್ ಹೊಸದಿಗಂತಕ್ಕೆ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಸಕ್ರೆಬೈಲು ಆನೆ ಬಿಡಾರದ ಭಾನುಮತಿ, ಸೋಮಣ್ಣ ಹಾಗೂ ರಾಘವೇಂದ್ರ ಆನೆಗಳು ಪಾಲ್ಗೊಂಡಿದ್ದವು. ಎಬಿಸಿ ಕ್ಯಾಂಪ್ ಮತ್ತು ಆನೆ ಮಾವುತರು ಸೇರಿ 30 ಕ್ಕೂ ಹೆಚ್ಚು ಸಿಬ್ಬಂದಿ ಇದರಲ್ಲಿ ಭಾಗಿಯಾಗಿದ್ದರು.