ಕೋವಿಡ್ ಸಂದರ್ಭ ಹಿಂದು ಕಾರ್ಯಕರ್ತರು ಏನು ಮಾಡಿದ್ದಾರೆ ಎನ್ನುವುದರ ದಾಖಲೆ ಕೊಡುತ್ತೇನೆ: ಎಚ್ ಡಿಕೆಗೆ ಶಾಸಕ ಕಾಮತ್ ತಿರುಗೇಟು

ಹೊಸದಿಗಂತ ವರದಿ,ಮಂಗಳೂರು:

ಹಿಂದು ಸಂಘಟನೆಯ ಕಾರ್ಯಕರ್ತರು ಕೋವಿಡ್ ಸಂದರ್ಭದಲ್ಲಿ ಏನು ಮಾಡಿದ್ದಾರೆ ಎನ್ನುವುದರ ದಾಖಲೆ ಕೊಡುತ್ತೇನೆ. ಆದರೆ ಕುಮಾರಸ್ವಾಮಿ ಅವರು ಆ ಸಂದರ್ಭದಲ್ಲಿ ಸಮಾಜಕ್ಕಾಗಿ ಏನು ಮಾಡಿದ್ದರೆ ಎನ್ನುವುದನ್ನು ಹೇಳಲಿ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಆರ್‌ಎಸ್‌ಎಸ್, ವಿಶ್ವಹಿಂದು ಪರಿಷತ್, ಬಜರಂಗದಳ, ಹಿಂದು ಜಾಗರಣ ವೇದಿಕೆ ಸೇರಿದಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕೋವಿಡ್ ಸಂದರ್ಭದಲ್ಲಿ ಎಲ್ಲಿದ್ದರು ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಕಾಮತ್, ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳ, ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಕೋವಿಡ್ ಸಂದರ್ಭದಲ್ಲಿ ಜನರ ನಡುವೆ ಕೆಲಸ ಮಾಡುತಿದ್ದರು. ಆದರೆ ಆ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ. ಬಜರಂಗದಳ ಕಾರ್ಯಕರ್ತರು ಕೋವಿಡ್ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಅಸಹಾಯಕರಿಗೆ ಸಹಾಯ ಮಾಡಿದ್ದಾರೆ. ಕೋವಿಡ್ ಸೋಂಕಿತರ ಶವ ಮುಟ್ಟಲು ಮನೆಯವರು ಹಿಂಜರಿದಂತಹ ಸಂದರ್ಭದಲ್ಲಿ 400ಕ್ಕೂ ಅಧಿಕ ಶವಗಳ ಅಂತ್ಯ ಸಂಸ್ಕಾರ ಮಾಡುವ ಮೂಲಕ ಜಿಲ್ಲಾಡಳಿತದೊಂದಿಗೆ ಕಾರ್ಯ ನಿರತರಾಗಿದ್ದರು. ಯಾರನ್ನೋ ಓಲೈಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂತಹ ಹೇಳಿಕೆ ನೀಡುವುದು ಸರಿಯಲ್ಲ.
ಮಂಗಳೂರಿನಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತಿದ್ದಾಗ ಆರ್‌ಎಸ್‌ಎಸ್ ಹಾಗೂ ಪರಿವಾರ ಸಂಘಟನೆಯ ಕಾರ್ಯಕರ್ತರು ಹೆಲ್ಪ್‌ಲೈನ್ ತೆರೆದು ಅವಶ್ಯಕತೆ ಉಳ್ಳವರಿಗೆ ನೆರವಾಗಿದ್ದಾರೆ. ಉಚಿತ ಆಂಬ್ಯುಲೆನ್ಸ್ ಸೇವೆ, ಐಸೋಲೇಷನ್ ಸೆಂಟರ್, ರಕ್ತದ ಅವಶ್ಯಕತೆಯಿರುವಾಗ 2847 ಯುನಿಟ್ ರಕ್ತದ ವ್ಯವಸ್ಥೆ, ತುರ್ತಾಗಿ ಆಕ್ಸಿಜನ್ ಪೂರೈಕೆ, ಸಾವಿರಾರು ಜನರಿಗೆ ಊಟದ ವ್ಯವಸ್ಥೆ, 16 ಸಾವಿರ ಕುಟುಂಬಗಳಿಗೆ ರೇಷನ್ ಕಿಟ್, 552 ಜನರಿಗೆ ಔಷಧ ವಿತರಣೆ ಸೇರಿದಂತೆ ಅನೇಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೋವಿಡ್ ಸಂಕಷ್ಟದ ಕಾಲದಲ್ಲಿ ಕುಮಾರಸ್ವಾಮಿ ಅವರು ಹೇಳಿಕೆ, ಪುಕ್ಕಟ್ಟೆ ಸಲಹೆಗಳನ್ನು ನೀಡುವುದಲ್ಲದೇ ಬೇರೆ ಏನು ಮಾಡಿದ್ದಾರೆ. ಸಂಘಟನೆಯ ಕಾರ್ಯಕರ್ತರು ಹಗಲು ಇರುಳೆನ್ನದೆ ಸಮಾಜದ ನಡುವೆ ಸೇವೆ ಮಾಡಿ ಅನೇಕ ಕಾರ್ಯಕರ್ತರು ಕೋವಿಡ್ ಸೋಂಕಿಗೂ ಒಳಗಾಗಿದ್ದಾರೆ. ಇವೆಲ್ಲದರ ದಾಖಲೆ ಬೇಕಿದ್ದರೆ ಕುಮಾರಸ್ವಾಮಿ ಅವರಿಗೆ ಕೊಡುತ್ತೇವೆ. ಹಾಗೆಯೇ ಕುಮಾರಸ್ವಾಮಿಯವರು ಏನು ಮಾಡಿದ್ದಾರೆ ಎನ್ನುವುದನ್ನೂ ಬಹಿರಂಗಪಡಿಸಲಿ ಎಂದು ಕಾಮತ್ ಸವಾಲು ಹಾಕಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!