ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಕೆಗೆ ರಾಜ ವಂಶಸ್ಥೆ ಪ್ರಮೋದಾದೇವಿ ವಿರೋಧ

ಹೊಸದಿಗಂತ ವರದಿ, ಮೈಸೂರು
ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಸುವುದು ಬೇಡ ಎಂದು ಮೈಸೂರಿನ ರಾಜ ವಂಶಸ್ಥೆ ಪ್ರಮೋದಾದೇವಿ ಹೇಳಿದರು.
ಬುಧವಾರ ಮೈಸೂರಿನ ಅರಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಚಾಮುಂಡಿಬೆಟ್ಟಕ್ಕೆ ರೋಪ್ ವೇ ಅಳವಡಿಸುವುದಾಗಿ ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಿಸಿದೆ. ಪ್ರವಾಸಿಗರನ್ನು ಆಕರ್ಷಿಸುವುದಕ್ಕೆಂದು ಚಾಮುಂಡಿಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಅವಶ್ಯಕತೆ ಇಲ್ಲ. ಮೈಸೂರು ನಗರದಿಂದ ಚಾಮುಂಡಿ ಬೆಟ್ಟಕ್ಕೆ ವಾಹನದಲ್ಲಿ ಹೋಗಲು ಕೇವಲ 20ನಿಮಿಷ ಸಾಕು. ಹಾಗಾಗಿ ಚಾಮುಂಡಿಬೆಟ್ಟದ ಪರಿಸರ ನಾಶ ಮಾಡಿ ರೋಪ್ ವೇ ಮಾಡುವ ಅಗತ್ಯವಿಲ್ಲ. ಚಾಮುಂಡಿ ಬೆಟ್ಟ ಒಂದು ಧಾರ್ಮಿಕ ಕ್ಷೇತ್ರವಾಗಿ ಉಳಿಯಬೇಕು. ಅದನ್ನ ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲು ಮುಂದಾದರೆ ಪರಿಸರ ನಾಶವಾಗುತ್ತೆ ಎಂದು ಎಚ್ಚರಿಸಿದರು.
ಈಗಾಗಲೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿರುವುದರಿಂದ ಚಾಮುಂಡಿ ಬೆಟ್ಟದ ಪರಿಸರಕ್ಕೆ ಡ್ಯಾಮೇಜ್ ಆಗಿದೆ. ಇರುವುದನ್ನ ಉಳಿಸಿಕೊಳ್ಳಬೇಕಿದೆ. ಈ ಹಿಂದೆ ಬೆರಳೆಣಿಕೆಯಷ್ಟಿದ್ದ ಮನೆಗಳು ಗ್ರಾಮವಾಗಿವೆ. ಬೆಟ್ಟದ ಮೇಲೆಯೇ ನಗರ ಪ್ರದೇಶ ನಿರ್ಮಾಣವಾಗುತ್ತಿದೆ. ಚಾಮುಂಡಿ ಬೆಟ್ಟದ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಆಲ್ಲಿ ಕಮರ್ಷಿಯಲ್ ಮಳಿಗೆಗಳ ಅವಶ್ಯಕತೆಯೂ ಇಲ್ಲ. ಮೂಲಭೂತ ಸೌಕರ‍್ಯಗಳ ನೀಡಿದರೆ ಸಾಕು ಎಂದರು.
ಚಾಮುಂಡಿ ಬೆಟ್ಟದ ಮೇಲಿನ ರಾಜೇಂದ್ರ ವಿಲಾಸ ಅರಮನೆ ಪುನಶ್ಚೇತನ ಕಾಮಗಾರಿ ಭರದಿಂದ ಸಾಗುತ್ತಿದ್ದು, ಸದ್ಯದಲ್ಲೇ ಪ್ರವಾಸಿಗರ ಬಳಕೆಗೆ ಮುಕ್ತವಾಗಲಿದೆ ಎಂದು ತಿಳಿಸಿದರು.
1975 ರಿಂದ ರಾಜೇಂದ್ರ ವಿಲಾಸ ಅರಮನೆ ಹೋಟೆಲ್ ಆಗಿ ನಡೆಯುತ್ತಿತ್ತು. ನಂತರ 1995 ರಲ್ಲಿ ರಾಜೇಂದ್ರ ವಿಲಾಸ ಅರಮನೆ ಮುಚ್ಚಲ್ಪಟ್ಟಿತ್ತು. ಬೆಟ್ಟದ ಮೇಲೆ 120 ಅಡಿ ಎತ್ತರದಲ್ಲಿರೋ ರಾಜೇಂದ್ರ ವಿಲಾಸ ಅರಮನೆ ಬಹಳ ದಿನಗಳಿಂದ ಪ್ರವಾಸಿಗರಿಗೆ ಮುಚ್ಚಿತ್ತು. ಇದೀಗ ರಾಜೇಂದ್ರ ವಿಲಾಸ ಪುನಶ್ಚೇತನ ಕಾಮಗಾರಿ ಆರಂಭಿಸಲಾಗಿದೆ. ತಜ್ಞರ ಅಭಿಪ್ರಾಯ ಪಡೆದು ನವೀಕರಣ ಮಾಡಲಾಗುತ್ತಿದೆ. ಅರಮನೆಯ ಪುರಾತನ ಪಾರಂಪರಿಕ ಶೈಲಿಯಲ್ಲೇ ನವೀಕರಣ ಕರ‍್ಯ ನಡೆಯಲಿದೆ. ಗೋಪುರದ ನವೀಕರಣ ಮಾಡುವುದು ಬಹಳ ಸವಾಲಾಗಿತ್ತು. ಎಲ್ಲವೂ ಒಂದು ಹಂತಕ್ಕೆ ಬಂದು ನಿಂತಿದೆ. ಮತ್ತೆ ಹೋಟೆಲ್ ಆಗಿ ಮುಂದುವರೆಸುವ ಉದ್ದೇಶವಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!