ಪುನೀತರ ಪಿಆರ್​ಕೆ ಪ್ರೊಡಕ್ಷನ್ಸ್ ಅಡಿ ತೆರೆಗೆ ಬರಲಿದೆ ಮತ್ತೊಂದು ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಪುನೀತ್ ರಾಜ್​ಕುಮಾರ್ ಅವರ ಕನಸಿನ ಕೂಸು ಪಿಆರ್​ಕೆ ಪ್ರೊಡಕ್ಷನ್ಸ್ ಅಡಿ ಈಗಾಗಲೇ ಹಲವು ಚಿತ್ರಗಳು ತೆರೆಕಂಡಿದ್ದು, ಇದೀಗ ಮತ್ತೊಂದು ಹೊಸ ಚಿತ್ರವನ್ನು ಅನೌನ್ಸ್ ಮಾಡಿದೆ.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೊಸ ಚಿತ್ರದ ಮೂಲಕ ಹಲವು ಹೊಸ ಪ್ರಯತ್ನಕ್ಕೆ ನಿರ್ಮಾಣ ಸಂಸ್ಥೆ ಮುಂದಾಗಿದೆ. ಚಿತ್ರಕ್ಕೆ ‘ಆಚಾರ್ & ಕೋ.’ (Achar & Co.) ಎಂದು ಶೀರ್ಷಿಕೆ ಇಡಲಾಗಿದ್ದು, ಇದು ಯಾವುದರ ಕತೆಯನ್ನು ಒಳಗೊಂಡಿದೆ ಎನ್ನುವುದನ್ನು ಚಿತ್ರತಂಡ ಬಹಿರಂಗಪಡಿಸಿದೆ.
60ರ ದಶಕದ ಬೆಂಗಳೂರಿನಲ್ಲಿ ನಡೆಯುವ ಕತೆ ಇದಾಗಿರಲಿದೆ. ಇದು ಪಿಆರ್​ಕೆ ಪ್ರೊಡಕ್ಷನ್ಸ್​ನಲ್ಲಿ ತಯಾರಾಗುತ್ತಿರುವ ಮೊದಲ ಮಹಿಳಾ ನಿರ್ದೇಶನದ ಚಿತ್ರವಾಗಿದೆ.
ಪಿ.ಆರ್.ಕೆ. ಪ್ರೊಡಕ್ಷನ್ಸ್​ನ 10 ನೇ ಚಿತ್ರವಾಗಿರುವ ‘ಆಚಾರ್ & ಕೋ.’, ಪಿಆರ್​ಕೆ ನಿರ್ಮಾಣ ಸಂಸ್ಥೆಯಲ್ಲಿ ಮಹಿಳಾ ನಿರ್ದೇಶಕಿಯೋರ್ವರು ಆಕ್ಷನ್ ಕಟ್ ಹೇಳುತ್ತಿರುವ ಮೊದಲ ಚಿತ್ರ ಇದಾಗಿದೆ. ತಾಂತ್ರಿಕ ವರ್ಗದಲ್ಲೂ ಹಲವು ಮಹಿಳೆಯರಿರುವುದು ವಿಶೇಷ.
‘ಆಚಾರ್ & ಕೋ.’ ಚಿತ್ರಕ್ಕೆ ಸಿಂಧು ಶ್ರೀನಿವಾಸ ಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಚಿತ್ರ. ಈಗಾಗಲೇ ತಮ್ಮ ಸಂಗೀತ ನಿರ್ದೇಶನದ ಮೂಲಕ ಎಲ್ಲೆಡೆ ಗುರುತಿಸಿಕೊಂಡಿರುವ, ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿರುವ ಬಿಂದುಮಾಲಿನಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಡಾನ್ನಿಲಾ ಕೊರ್ರೆಯಾ ಕಾರ್ಯನಿರ್ವಹಿಸಲಿದ್ದು, ಸ್ಟೈಲಿಸ್ಟ್ ಆಗಿ ಇಂಚರ ಸುರೇಶ್ ಚಿತ್ರತಂಡದಲ್ಲಿದ್ದಾರೆ.
ಪಿಆರ್​ಕೆ ಪ್ರೊಡಕ್ಷನ್ಸ್​ ಟ್ವೀಟ್ ಮೂಲಕ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡಿದೆ. ಶೀರ್ಷಿಕೆಯಲ್ಲಿ ‘ಆಚಾರ್ & ಕೋ.’ ಎಂದು ಬರೆಯಲಾಗಿದ್ದು, ಅದಕ್ಕೆ ‘Since 1971’ ಎಂಬ ಟ್ಯಾಗ್​ಲೈನ್ ಇದೆ.
ಅಶ್ವಿನಿ ಪುನೀತ್ ರಾಜ್​ಕುಮಾರ್ ಜತೆಗೆ ಗುರುದತ್ ಎ ತಲ್ವಾರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!