ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ವಿದ್ಯಾರ್ಥಿಗಳ ಗೈರು ಹೆಚ್ಚಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಹಿಜಾಬ್ ವಿಚಾರವಾಗಿ ಹೆಚ್ಚು ಗೈರು ಆಗಿಲ್ಲ. ಖಾಸಗಿ ಅಭ್ಯರ್ಥಿಗಳು ಹೆಚ್ಚಾಗಿ ಪರೀಕ್ಷೆಗೆ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಪಾಸ್ ಮಾಡುತ್ತಾರೆಂದು ಕೆಲವರು ಅಂದುಕೊಂಡಿದ್ದರು, ಕೋವಿಡ್ ಇರುತ್ತೆ, ಪರೀಕ್ಷೆ ಇರೋಲ್ಲ, ಹಾಗೇ ಪಾಸ್ ಮಾಡುವ ನಿರೀಕ್ಷೆಯಲ್ಲಿ ಇದ್ದರು. ಈ ಕುರಿತು ಇಲಾಖೆಗೂ ಸಾಕಷ್ಟು ಕರೆಗಳು ಬಂದಿದ್ದವು. ರೆಗ್ಯುಲರ್ ಕ್ಲಾಸ್ ಸರಿಯಾಗಿ ಆಗಿಲ್ಲ ಅಂತ ಹೇಳ್ತಿದ್ದರು. ಹೀಗಾಗಿ ಖಾಸಗಿ ಅಭ್ಯರ್ಥಿಗಳು ಹೆಚ್ಚು ಗೈರಾಗಿದ್ದಾರೆ . ಆದರೆ ಈ ಗೈರು ಹಾಜರಾತಿಗೂ ಹಿಜಾಬ್ ವಿಚಾರಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿಂದು ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ನಡೆದಿದ್ದು, 24,873 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 8,70,429 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇದರಲ್ಲಿ 8,45,556 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.