ಹಕ್ಕಿ ಹಬ್ಬಕ್ಕೆ ತೆರೆ : ಅಪರೂಪದ ಪಕ್ಷಿಗಳನ್ನು ಕಣ್ತುಂಬಿಕೊಂಡ ಪ್ರಕೃತಿ ಪ್ರಿಯರು!

ಹೊಸದಿಗಂತ ವರದಿ, ಮಡಿಕೇರಿ:

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಆಶ್ರಯದಲ್ಲಿ ಮಡಿಕೇರಿ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಕರ್ನಾಟಕ ಪಕ್ಷಿ ಹಬ್ಬಕ್ಕೆ ಸಂಭ್ರಮದ ತೆರೆ ಬಿದ್ದಿತ್ತು.
ನೂರಾರು ಪ್ರಕೃತಿ ಪ್ರಿಯರು ಪಶ್ಚಿಮಘಟ್ಟ ಪ್ರದೇಶದ ಅಪರೂಪದ ಪಕ್ಷಿಗಳನ್ನು ವೀಕ್ಷಿಸುವ ಮೂಲಕ ಕೊಡಗಿನ ಪರಿಸರಕ್ಕೆ ಧನ್ಯವಾದ ಅರ್ಪಿಸಿದರು.
ಅರಣ್ಯ ಇಲಾಖೆಯು ಮಡಿಕೇರಿ ನಗರ ಮತ್ತು ಸುತ್ತಲಿನ 8 ಜಾಗಗಳನ್ನು ಗುರುತಿಸಿ ಪಕ್ಷಿ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿತ್ತು. ಮಡಿಕೇರಿ ಅರಣ್ಯ ಭವನದ ಬಳಿ, ಗಾಳಿಬೀಡು, ನಿಶಾನೆ ಬೆಟ್ಟ, ಮೊಣ್ಣಂಗೇರಿ, ಬೊಟ್ಟಪ್ಪ ದೇವಸ್ಥಾನದ ಸರಹದ್ದು ಸೇರಿದಂತೆ ಸುತ್ತಲಿನ ಸ್ಥಳಗಳಲ್ಲಿ ಪಕ್ಷಿ ಪ್ರಿಯರು ಪಕ್ಷಿ ವೀಕ್ಷಿಸಿದರು.
ಹಕ್ಕಿ ಹಬ್ಬದ ಸಂಭ್ರಮದಲ್ಲಿ ಮಂಜಿನ ನಗರಿ ಮಡಿಕೇರಿ ಮತ್ತು ಸುತ್ತಲಿನ ಪಕ್ಷಿ ಸಂಕುಲಗಳ ತಾಣಗಳು ಪಕ್ಷಿ ಪ್ರಿಯರ ಮನಸ್ಸಿಗೆ ಮುದ ನೀಡಿದವು. ಭಾನುವಾರ ಪಕ್ಷಿ ವೀಕ್ಷಣೆಯಲ್ಲಿ ಜಿ.ಪಂ.ಸಿಇಓ ಭಂವರ್ ಸಿಂಗ್ ಮೀನಾ, ಮಡಿಕೇರಿ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಮ್ ಬಾಬು, ಕರ್ನಾಟಕ ಪರಿಸರ ಪ್ರವಾಸೋದ್ಯಮ ವ್ಯವಸ್ಥಾಪಕ ನಿರ್ದೇಶಕ ತಡಗಣ ವಿ.ಗಣೇಶ್, ಕಾರ್ಯನಿರ್ವಾಹಕ ಸಹಾಯಕಿ ವನಶ್ರೀ, ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ಘಟಕದ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ಹುಲಿ ಕೇಂದ್ರೀಕೃತ ಸಫಾರಿ ಮತ್ತು ಪ್ರವಾಸೋದ್ಯಮದಿಂದ ನವ ತಲೆಮಾರಿನ ವನ್ಯಜೀವಿ ಪ್ರೇಮಿಗಳನ್ನು ಪಕ್ಷಿಗಳ ಸುಂದರ ಲೋಕದ ಕಡೆಗೆ ಕರೆ ತರುವ ಉದ್ದೇಶದಿಂದ ಹಕ್ಕಿ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಮಡಿಕೇರಿ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ತಿಳಿಸಿದರು.
ಬಾಜಾ ಪಕ್ಷಿ ದರ್ಶನ: ಪ್ರತಿ ವರ್ಷ ರಾಜ್ಯದ ವಿವಿಧ ಸ್ಥಳಗಳಲ್ಲಿ ಹಕ್ಕಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವಿಭಿನ್ನ ಭೌಗೋಳಿಕ ಪ್ರದೇಶ, ಜೀವ ವೈವಿಧ್ಯತೆ, ಬಗೆ ಬಗೆಯ ಪಕ್ಷಿಗಳು ಇರುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮಡಿಕೇರಿ ಪಕ್ಷಿ ಹಬ್ಬದಲ್ಲಿ ಪ್ರತಿ ಗುಂಪಿನವರು 60 ಕ್ಕೂ ಹೆಚ್ಚಿನ ವಿವಿಧ ಬಗೆಯ ಪಕ್ಷಿಗಳನ್ನು ಗುರುತಿಸಿ ವೀಕ್ಷಿಸಿದ್ದಾರೆ. ಪ್ರತಿ ವರ್ಷ ಹಕ್ಕಿ ಹಬ್ಬದಲ್ಲಿ ವಿಶೇಷ ಪಕ್ಷಿಯೊಂದರ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ. ಈ ಬಾರಿ ಬಾಜಾ ಪಕ್ಷಿಯನ್ನು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮೂರು ದಿನಗಳ ಕಾಲ ನಡೆದ ಹಕ್ಕಿ ಹಬ್ಬದಲ್ಲಿ ನಾಡಿನ ವಿವಿಧ ಕಡೆಗಳಿಂದ ಪಕ್ಷಿ ತಜ್ಞರು, ಪಕ್ಷಿ ವೀಕ್ಷಕರು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸುವ ಮೂಲಕ ಪಕ್ಷಿಗಳ ಜೀವನ ಕ್ರಮವನ್ನು ಅಧ್ಯಯನ ಮಾಡಿದರು. ಈ ಹಕ್ಕಿ ಹಬ್ಬವು ಪಶ್ಚಿಮ ಘಟ್ಟದ ವನ್ಯಜೀವಿಗಳ ಅಧ್ಯಯನಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಮ್ ಬಾಬು ತಿಳಿಸಿದರು.
ನಿಸರ್ಗ ತಜ್ಞರಾದ ಪ್ರವಾಸೋದ್ಯಮ ಇಲಾಖೆಯ ರಾಹುಲ್ ಆರಾಧ್ಯ, ನಾಗರಾಜ್, ವಿಜಯ್ ಇತರರು ಪಕ್ಷಿಪ್ರಿಯರಿಗೆ ಪಕ್ಷಿಗಳ ಚಲನವನ ಹಾಗೂ ಅವುಗಳ ಆವಾಸ ಸ್ಥಾನದ ಬಗ್ಗೆ ಪೂರಕ ಮಾಹಿತಿ ನೀಡಿದರು. ಪಕ್ಷಿಗಳ ಜೀವನ ಕ್ರಮ ಹಾಗೂ ಜೀವ ಪರಿಸರ ಸಂರಕ್ಷಣೆ ಕುರಿತು ಪಕ್ಷಿ ತಜ್ಞ ಡಾ. ಎಸ್.ವಿ.ನರಸಿಂಹನ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ ಸಿ.ಜಿ.ಕುಶಾಲಪ್ಪ ಸೇರಿದಂತೆ ವಿವಿಧ ತಜ್ಞರಿಂದ ಉಪನ್ಯಾಸದೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ದೇಶದ ವಿವಿಧ ಭಾಗಗಳಿಂದ ಸಂಶೋಧಕರು, ವನ್ಯಜೀವಿ ಛಾಯಾಗ್ರಾಹಕರು, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಶಿಕ್ಷಣಾರ್ಥಿಗಳು ಸೇರಿದಂತೆ ಪಕ್ಷಿ ವೀಕ್ಷಕರು, ಪಕ್ಷಿ ಪ್ರಿಯರು, ಅರಣ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!