ಹೊಸದಿಗಂತ ವರದಿ ಅಂಕೋಲಾ
ತಾಲೂಕಿನ ಭಾವಿಕೇರಿ ಕಡಲ ತೀರದಲ್ಲಿ ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ಎಂಡ್ ಎಕೋ ಸಿಸ್ಟಮ್ ವತಿಯಿಂದ ಸಂರಕ್ಷಿಸಲ್ಪಟ್ಪ ಮೊಟ್ಟೆಗಳಿಂದ ಹೊರ ಬಂದ ಸುಮಾರು 60 ಕ್ಕೂ ಹೆಚ್ಚು ಆಲಿವ್ ರಿಡ್ಲೆ ಜಾತಿಯ ಕಡಲಾಮೆಯ ಮರಿಗಳನ್ನು ಕಡಲಿಗೆ ಬಿಡಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಂಕೋಲಾ ವಲಯ ಅರಣ್ಯಾಧಿಕಾರಿ ಗಣಪತಿ ನಾಯಕ ಅವರು ಮಾತನಾಡಿ ಅಪರೂಪದ ಕಡಲಾಮೆಗಳನ್ನು ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು ಭಾವಿಕೇರಿ ಕಡಲ ತೀರದಲ್ಲಿ ಸಂರಕ್ಷಿಸಲ್ಪಟ್ಟ ಕಡಲಾಮೆಯ ಮೊಟ್ಟೆಗಳ ಸಂರಕ್ಷಣೆಯಲ್ಲಿ ಸ್ಥಳೀಯರ ಪಾತ್ರ ಅತ್ಯಂತ ಮಹತ್ವಪೂರ್ಣದ್ದಾಗಿದೆ ಎಂದರು.
ಕಡಲಾಮೆಯ ಮರಿಗಳನ್ನು ಸಮುದ್ರಕ್ಕೆ ಬಿಡುವ ಕೋಸ್ಟಲ್ ಮರೈನ್ ವಿಭಾಗದ ಅಧಿಕಾರಿ ಪ್ರಮೋದ ಮಾತನಾಡಿ ಕೆಲವು ದಿನಗಳ ಹಿಂದೆ ಭಾವಿಕೇರಿ ಕಡಲ ತೀರದಲ್ಲಿ 50 ಕ್ಕೂ ಅಧಿಕ ಮರಿಗಳನ್ನು ನೀರಿಗೆ ಬಿಡಲಾಗಿತ್ತು
ಇದೀಗ ಮತ್ತೊಮ್ಮೆ 60 ಕ್ಕೂ ಹೆಚ್ಚು ಮರಿಗಳು ಕಡಲ ಒಡಲಿಗೆ ಸೇರುತ್ತಿರುವುದು ಸಂತಸದ ಸಂಗತಿ ಎಂದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಂಶೋಧನಾ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.