ಹೊಸದಿಗಂತ ವರದಿ, ಮೈಸೂರು
ಭಾರತ ಹೇಗಿರಬೇಕು ಎಂಬುದರ ಕಲ್ಪನೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿದ್ದಾರೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.
ಗುರುವಾರ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಭಾರತದ ಅರ್ಥ ವ್ಯವಸ್ಥೆ ಎಂತಹ ಪರಿಸ್ಥಿತಿಯಲ್ಲೂ ಗಟ್ಟಿಯಾಗಿ ನಿಂತಿದೆ ಎಂದರೆ, ಅದಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಚಿಂತನೆಗಳೇ ಕಾರಣ. ಭಾರತದ ಅರ್ಥ ವ್ಯವಸ್ಥೆ ಹೇಗಿರಬೇಕು ಎಂದು ಸಂವಿಧಾನದಲ್ಲಿಯೇ ಅಂಬೇಡ್ಕರ್ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಬಡತನದಲ್ಲಿ ಜೀವನವನ್ನು ಸಾಗಿಸಿ, ವಿದೇಶದಲ್ಲಿ ನಿರಂತರ ಅಧ್ಯಯನದಲ್ಲಿ ತೊಡಗಿ ದೊಡ್ಡ ಮಟ್ಟಕ್ಕೆ ಏರಿದ ಅಂಬೇಡ್ಕರ್ ಅವರು, ತಮ್ಮ ಅಪಾರವಾದ ಜ್ಞಾನ ಭಂಡಾರದಿAದ ನನ್ನ ಭಾರತ ಹೀಗೆ ಇರಬೇಕು ಎಂಬ ಕಲ್ಪನೆಯನ್ನು ನೀಡಿದರು. ಅಂತಹ ಮಹಾನ್ ವ್ಯಕ್ತಿಯನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿತು ಎಂದು ಯೋಚಿಸಬೇಕು, ಕಾನೂನು ಸಚಿವರಾಗಿದ್ದ ಬಾಬಾ ಸಾಹೇಬರು ಈ ದೇಶದಲ್ಲಿ ಮಹಿಳೆಯರ ಸಬಲೀಕರಣವಾಗುತ್ತಿಲ್ಲ, ಕೂಲಿ ಕಾರ್ಮಿಕರುಗಳಿಗೆ ಬೆಲೆ ಇಲ್ಲ ಎಂದು ರಾಜೀನಾಮೆ ನೀಡಿದರು. ಮುಂಬೈ ನಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರು, ಅವರ ವಿರುದ್ಧವೇ ಕಾಂಗ್ರೆಸ್ ಸ್ಪರ್ಧಿಯನ್ನು ಹಾಕಿ, ಅವರ ಸೋಲಿಗೆ ಕಾರಣವಾಯಿತು. ಬಾಬಾ ಸಾಹೇಬರು ಇದ್ದಾಗ ಅವರನ್ನು ಸರಿಯಾಗಿ ಕಾಣದೆ ಇಂದು ಕಾಂಗ್ರೆಸ್ ಅವರ ಹೆಸರನ್ನು ಬಳಸಿಕೊಂಡು ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು. ಅಂಬೇಡ್ಕರ್ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದಾಗ, ಅವರ ಅಂತಿಮ ಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡದೆ ಇದ್ದದ್ದು ಕಾಂಗ್ರೆಸ್, ಈ ಸತ್ಯ ಪ್ರಪಂಚಕ್ಕೆ ಗೊತ್ತಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕೆ.ಆರ್. ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ಉಪಾಧ್ಯಕ್ಷ ರಾದ ಸಂತೋಷ್ ಶಂಭು, ರವಿ, ನಗರಪಾಲಿಕಾ ಸದಸ್ಯರುಗಳಾದ ಶಾಂತಮ್ಮ ವಡಿವೇಲು, ಛಾಯಾದೇವಿ ನವೀನ್ , ಎಸ್.ಸಿ ಮೋರ್ಚಾ ಅಧ್ಯಕ್ಷ ಮುರುಳಿ, ಬಿ ಎಲ್ ಎ 1 ಪ್ರಸಾದ್ ಬಾಬು, ನಾಮನಿರ್ದೇಶಿತ ನಗರಪಾಲಿಕಾ ಸದಸ್ಯ ಪಿ.ಟಿ.ಕೃಷ್ಣ, ಪ್ರಮುಖರಾದ ಮಹದೇವ್, ನವೀನ್, ಜಯಂತಿ, ಬಾಬು, ರಾಜೀವ್, ರಾಜು, ನಾಗರತ್ನ, ರೇವತಿ ಮತ್ತಿತರರು ಹಾಜರಿದ್ದರು.