ಹೊಸದಿಗಂತ ವರದಿ, ಮಡಿಕೇರಿ
ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಉಸ್ತುವಾರಿಗಳಾದ ಕೋಳಿಬೈಲು ಚಿನ್ನಪ್ಪ ವೆಂಕಟೇಶ್, ಎಸ್.ಬಿ.ಉದಯ್ ಕುಮಾರ್ ಹಾಗೂ ಜಿಲ್ಲಾ ಸಂಚಾಲಕ ಹೆಚ್.ಜಿ.ಬಾಲಸುಬ್ರಹ್ಮಣ್ಯ ಅವರುಗಳು, ಭ್ರಷ್ಟ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಗುತ್ತಿಗೆದಾರರಿಂದ ಶೇ.40 ರಷ್ಟು ಕಮಿಷನ್ ಪಡೆಯುವ ವಿಚಾರ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಭ್ರಷ್ಟಾಚಾರ ಎನ್ನುವುದು ಅತ್ಯಂತ ಗರಿಷ್ಠ ಮಿತಿಯನ್ನು ತಲುಪಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.
ಭ್ರಷ್ಟರ ಹಣದ ದಾಹಕ್ಕೆ ಗುತ್ತಿಗೆದಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರದಿದ್ದಲ್ಲಿ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳು ದಿಟ್ಟ ನಿರ್ಧಾರ ಕೈಗೊಂಡು ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ವಜಾಗೊಳಿಸಬೇಕು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ