ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಗೂಢ ಕಾಯಿಲೆಯೊಂದು ರಾಜಸ್ಥಾನದ ಸಿರೋಹಿ ಜಿಲ್ಲೆಯ ಜನರನ್ನು ಕಾಡುತ್ತಿದೆ. ಕಳೆದ ಕೆಲವು ದಿನಗಳಿಂದ ಮಕ್ಕಳು ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದುವರೆಗೆ ಏಳು ಮಕ್ಕಳು ಈ ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ್ದು, ಹಲವರು ರೋಗದಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ವಿಚಿತ್ರ ಕಾಯಿಲೆ ಹರಡುತ್ತಿದ್ದಂತೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಸಿರೋಹಿಯ ಫುಲಾಬಾಯಿ ಖೇರಾ ಗ್ರಾಮಕ್ಕೆ ಜೈಪುರ ಮತ್ತು ಜೋಧಪುರದಿಂದ ವಿಶೇಷ ತಂಡಗಳನ್ನು ಕಳಿಸಲಾಗಿದೆ. ಕಾಯಿಲೆಯ ಮೂಲ ಕಂಡುಹಿಡಿಯಲು ಆರೋಗ್ಯಾಧಿಕಾರಿಗಳು ರೋಗಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ರಾಜಸ್ಥಾನದ ಆರೋಗ್ಯ ಸಚಿವ ಪರ್ಸಾದಿ ಲಾಲ್ ಮೀನಾ ಹೇಳಿದ್ದಾರೆ.
6 ದಿನಗಳಲ್ಲಿ 10 ರಿಂದ 15 ವರ್ಷ ವಯಸ್ಸಿನ ಏಳು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆಯಾ ಗ್ರಾಮಗಳಲ್ಲಿ ಇನ್ನೂ ಎಷ್ಟು ಮಕ್ಕಳು ರೋಗಕ್ಕೆ ತುತ್ತಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ತಂಡ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿವೆ. ಮಕ್ಕಳು ಫಿಟ್ಸ್ ಮತ್ತು ಜ್ವರದಿಂದ ಬಳಲುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಭನ್ವರ್ ಲಾಲ್ ಹೇಳಿದ್ದಾರೆ.