ಜೀಪ್‌- ಟ್ರಕ್‌ ನಡುವೆ ಭೀಕರ ಅಪಘಾತ; ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ 6 ಮಂದಿ ಸ್ಥಳದಲ್ಲೇ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಗೌರಿಗಂಜ್ ಪ್ರದೇಶದಲ್ಲಿ ಬೊಲೇರೋ ಜೀಪ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ತಡರಾತ್ರಿ 12.15 ರ ಸುಮಾರಿಗೆ ಬಾಬುಗಂಜ್ ಸಗ್ರಾ ಆಶ್ರಮದ ಬಳಿ ಅಪಘಾತ ಸಂಭವಿಸಿದೆ. ರಾಯ್ ಬರೇಲಿಯ ನಾಸಿರಾಬಾದ್ ಪ್ರದೇಶದಲ್ಲಿ ನಡೆದಿದ್ದ ಮದುವೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ಜನರನ್ನು ತುಂಬಿಸಿಕೊಂಡು ಅಮೇಥಿ ಕಡೆಗೆ ಬರುತ್ತಿದ್ದ ಬೊಲೆರೊ ಜೀಪ್ ಗೆ ಟ್ರಕ್‌ ಡಿಕ್ಕಿಯಾಗಿ ಅವಘಡ ಘಟಿಸಿದೆ.
ಮೃತಪಟ್ಟವರನ್ನು ಕಲ್ಲು (40), ಅವರ ಮಗ ಸೌರಭ್(8) , ಕೃಷ್ಣ ಕುಮಾರ್ ಸಿಂಗ್ (30), ಶಿವ ಮಿಲನ್, ರವಿ ತಿವಾರಿ ಮತ್ತು ತ್ರಿವೇಣಿ ಪ್ರಸಾದ್ ಎಂದು ಗುರುತಿಸಲಾಗಿದೆ ಎಂದು ಎಸ್ಪಿ ದಿನೇಶ್‌ ಸಿಂಗ್‌ ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಲಕ್ನೋಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಜೀಪ್ ನುಜ್ಜುಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!