ಸಂಪುಟ ವಿಸ್ತರಣೆ ದಿಲ್ಲಿಯಲ್ಲಿ ವಿಶೇಷ ಸಭೆ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್ 
ಬೆಂಗಳೂರು: ಕಳೆದ ಕೆಲವು ಸಮಯದಿಂದ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಊಹಾಪೋಹಗಳು ನಡೆಯುತ್ತಲೇ ಇವೆ. ಸಚಿವ ಸ್ಥಾನ ಆಕಾಂಕ್ಷಿಗಳು ಲಾಬಿ ನಡೆಸುತ್ತಲೇ ಇದ್ದಾರೆ. ಈ ಮಧ್ಯೆ ಸಚಿವ ಸಂಪುಟ ಕುರಿತು ಹೈಕಮಾಂಡ್ ಸೂಚನೆ ಕೊಟ್ಟಿದೆ. ಚರ್ಚೆ ನಡೆಸುವುದಕ್ಕೆ ದಿಲ್ಲಿಗೆ ಬರುವಂತೆ ಆಹ್ವಾನಿಸಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೊಸದಿಲ್ಲಿಯಲ್ಲಿ ಕರ್ನಾಟಕದ ಬಗ್ಗೆ ವಿಶೇಷ ಸಭೆ  ಕರೆಯುವುದಾಗಿ ತಿಳಿಸಿದ್ದಾರೆ. ಆ ಸಭೆಯ ನಂತರ ಮಾಹಿತಿ ನೀಡುವುದಾಗಿ ಹೇಳಿದ್ದು, ದಿಲ್ಲಿಗೆ ಬರುವಂತೆ ನಡ್ಡಾ ಅವರು ತಮಗೆ ತಿಳಿಸಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ಅಲ್ಲಿಯೇ ತೀರ್ಮಾನವಾಗಲಿದೆ ಎಂದು ಸಿಎಂ ಮಾಹಿತಿ ನೀಡಿದರು.
ಹುಬ್ಬಳ್ಳಿ ಘಟನೆ ಕಾನೂನು ಕ್ರಮ
ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದ ಎಲ್ಲರನ್ನೂ ಬಂಧಿಸಲಾಗಿದೆ. ಅದರ ಹಿಂದಿರುವ ನಾಯಕರ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮ ಜರಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮವಾಗಿರುವ ಕುರಿತು    ಗೃಹ ಸಚಿವರ ಗಮನಕ್ಕೆ ಬಂದ ಕೂಡಲೇ ನಿಷ್ಪಕ್ಷಪಾತ ತನಿಖೆಯಾಗಲು ಸಿಐಡಿಗೆ ವಹಿಸಲಾಗಿದೆ. ಪರೀಕ್ಷೆ ನಡೆದಿರುವ ಕೇಂದ್ರದಲ್ಲಿ ಸಮಸ್ಯೆಯಾಗಿದ್ದರೆ, ಅಧೀಕ್ಷಕರ ಮಟ್ಟದಲ್ಲಿ ಅಥವಾ ಮೇಲಾಧಿಕಾರಿಗಳ ಸಮಸ್ಯೆ ಇದ್ದರೆ ಸಮಗ್ರವಾಗಿ ತನಿಖೆ ಮಾಡಲು ಆದೇಶ ನೀಡಲಾಗಿದೆ. ಬೇರೆ ಪಕ್ಷದ ಸರಕಾರವಾಗಿದ್ದರೆ ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ದರು. ನಾವು ಸಿಐಡಿಗೆ ಮುಕ್ತ ಅವಕಾಶ ನೀಡಿದ್ದು,  ತನಿಖೆ ಕೈಗೊಂಡಿದ್ದಾರೆ. ಯಾರೇ ತಪ್ಪಿ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.
ಪರೀಕ್ಷೆಗಳನ್ನು ಪುನಃ ಕೈಗೊಳ್ಳಲು ವಿದ್ಯಾರ್ಥಿಗಳು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿಐಡಿ ಸಮಗ್ರ ವರದಿ ನೀಡಿದ ನಂತರ  ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!