ಹೊಸದಿಗಂತ ಡಿಜಿಟಲ್ ಡೆಸ್ಕ್
ಉಡುಪಿ: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪ್ರಾರಂಭವಾಗಿದೆ. ಈ ಮಧ್ಯೆ ಹಿಜಾಬ್ ವಿವಾದಕ್ಕೆ ಕಾರಣವಾಗಿದ್ದ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ಮನೆಗೆ ಮರಳಿದ್ದಾರೆ.
ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಉಡುಪಿ ವಿದ್ಯೋದಯ ಪ.ಪೂ. ಕಾಲೇಜಿನಲ್ಲಿ ಪರೀಕ್ಷೆ ನಿಗದಿಯಾಗಿದೆ. ಕೆಲವು ದಿನಗಳ ಹಿಂದೆ ರಾಜ್ಯಾದ್ಯಂತ ಭುಗಿಲೆದ್ದ ಹಿಜಾಬ್ ವಿವಾದಕ್ಕೆ ಕಾರಣರಾದ 6 ವಿದ್ಯಾರ್ಥಿನಿಯರ ಪೈಕಿ ಇಬ್ಬರಿಗೆ ಇಂದು ವಾಣಿಜ್ಯ ವಿಭಾಗದ ಬಿಸಿನೆಸ್ ಸ್ಟಡೀಸ್ ಪರೀಕ್ಷೆಯಿತ್ತು. ಆಲಿಯಾ ಅಸ್ಸಾದಿ ಮತ್ತು ರೇಶಮ್ ಅವರು ಬೆಳಗ್ಗೆ ಹಾಲ್ ಟಿಕೆಟ್ ಪಡೆದು ಪರೀಕ್ಷೆ ಬರೆಯಲು ಆಗಮಿಸಿದ್ದಾರೆ.
ಬುರ್ಖಾ ಧರಿಸಿಕೊಂಡು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿನಿಯರು, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಈ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಮನವೊಲಿಸಲು ಯತ್ನಿಸಿದ್ದಾರೆ. ಅದಕ್ಕೊಪ್ಪದೇ ಇದ್ದಾಗ, ಸರಕಾರ ಹಾಗೂ ಹೈಕೋರ್ಟ್ ಆದೇಶದಂತೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ.
ಪಟ್ಟು ಬಿಡದ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದಲ್ಲೇ ಇದ್ದರು. ಆದರೆ ಪರೀಕ್ಷೆಗೆ ಹಾಜರಾಗುವ ಅವಧಿ ಕೊನೆಗೊಂಡ ಕೂಡಲೇ ಅವರನ್ನು ಸಿಬ್ಬಂದಿ ಕೇಂದ್ರದಿಂದ ಹೊರಕಳಿಸಿದ್ದಾರೆ. ಪರೀಕ್ಷಾ ಕೇಂದ್ರದಿಂದ ನಿರ್ಮಿಸಿದ ವಿದ್ಯಾರ್ಥಿನಿಯರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ