ನಿಮ್ಮ ಟ್ವೀಟ್‌ಗೆ ನಾನು ಕನ್ನಡದಲ್ಲಿ ಟೈಪ್ ಉತ್ತರ ಕೊಟ್ಟರೆ?: ಅಜಯ್ ದೇವಗನ್ ಗೆ ಕಿಚ್ಚ ಸುದೀಪ್ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡ ನಟ, ಕಿಚ್ಚ ಸುದೀಪ್ ಇತ್ತೀಚೆಗಷ್ಟೇ ನೀಡಿದ್ದ ಒಂದು ಸಂದರ್ಶನ ಇದೀಗ ವಿವಾದಕ್ಕೆ ಗ್ರಾಸವಾಗಿದ್ದು, ಈ ಬಗ್ಗೆ ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ದೇವಗನ್ ಟ್ವೀಟ್ ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ‘ಹಲೋ ಅಜಯ್ ದೇವ್ಗನ್ ಸರ್, ನಾನು ಆ ಸಾಲನ್ನು ಬೇರೆಯದ್ದೇ ಅರ್ಥದಲ್ಲಿ ಹೇಳಿದ್ದೆ. ಆದರೆ, ಅದು ನಿಮಗೆ ಬೇರೆಯದ್ದೇ ರೀತಿಯಲ್ಲಿ ತಲುಪಿದೆ ಎಂದು ಭಾವಿಸುತ್ತೇನೆ. ನಾನು ನಿಮ್ಮನ್ನು ಖುದ್ದಾಗಿ ಭೇಟಿ ಮಾಡಿದಾಗ ಆ ಹೇಳಿಕೆಯ ಬಗ್ಗೆ ವಿವರಿಸುವೆ. ನೋಯಿಸುವ ಉದ್ದೇಶದಿಂದಾಗಲಿ, ಪ್ರಚೋದಿಸಲು ಮತ್ತು ಚರ್ಚೆಯನ್ನು ಹುಟ್ಟು ಹಾಕಲು ನಾನು ಆ ಹೇಳಿಕೆಯನ್ನು ನೀಡಿಲ್ಲ. ನಾನು ಹಾಗೆ ಯಾಕೆ ಮಾಡಲಿ?’ ಎಂದು ಸರಣಿ ಟ್ವಿಟ್ ಮಾಡಿದ್ದಾರೆ.

‘’ನಾನು ನಮ್ಮ ದೇಶದ ಪ್ರತಿಯೊಂದು ಭಾಷೆಯನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ ಸರ್. ಈ ಟಾಪಿಕ್‌ನ ಇಲ್ಲಿಗೆ ನಿಲ್ಲಿಸಲು ಬಯಸುತ್ತೇನೆ. ನಾನು ಆ ಸಾಲನ್ನು ಬೇರೆಯದ್ದೇ ರೀತಿಯಲ್ಲಿ ಹೇಳಿದ್ದೆ. ನಿಮ್ಮ ಮೇಲೆ ಯಾವಾಗಲೂ ನನ್ನಲ್ಲಿ ಪ್ರೀತಿ ಇರುತ್ತದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುವ ನಿರೀಕ್ಷೆ ಇದೆ’’

‘ಇನ್ನೊಂದು ಮಾತು ಅಜಯ್ ಸರ್… ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ ನನಗೆ ಅರ್ಥವಾಯಿತು. ಯಾಕಂದ್ರೆ, ನಾವು ಪ್ರೀತಿಯಿಂದ ಹಾಗೂ ಗೌರವದಿಂದ ಹಿಂದಿ ಕಲಿತಿದ್ದೇವೆ. ಆದರೆ, ನಿಮ್ಮ ಟ್ವೀಟ್‌ಗೆ ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಟೈಪ್ ಮಾಡಿದ್ದರೆ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸುತ್ತಿದ್ದೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್..’’ ಎಂದು ಅಜಯ್‌ ದೇವ್ಗನ್‌ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದಾರೆ.

ಈ ಟ್ವಿಟ್ ಗೆ ಉತ್ತರಿಸಿರುವ ಅಜಯ್ ದೇವಗನ್ , ತಪ್ಪು ತಿಳುವಳಿಕೆಯಿಂದಾಗಿ ಇಷ್ಟೆಲ್ಲ ಆಯಿತು. ಈ ವಿಷಯವನ್ನು ತಿಳಿಗೊಳಿಸಿದ್ದಕ್ಕೆ ಧನ್ಯವಾದಗಳು ಸ್ನೇಹಿತ ಸುದೀಪ್. ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ಮತ್ತು ಪ್ರತಿಯೊಬ್ಬರೂ ನಮ್ಮ ಭಾಷೆಯನ್ನು ಗೌರವಿಸಬೇಕು ಎಂದು ನಿರೀಕ್ಷಿಸುತ್ತೇವೆ. ಬಹುಶಃ ಅನುವಾದದಲ್ಲಿ ಏನೋ ಮಿಸ್ ಆಗಿರಬಹುದು’ ಎಂದು ಅಜಯ್ ದೇವಗನ್ ಟ್ವಿಟ್ ಮಾಡುವ ಮೂಲಕ ಈ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ.

ಸಂದರ್ಶನದಲ್ಲಿ ಕಿಚ್ಚ ಸುದೀಪ್ ಹೇಳಿದ್ದೇನು?
‘ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ. ನಾವು ದಕ್ಷಿಣದಿಂದ ಬರ್ತೀವಿ ಅಂದ ಮಾತ್ರಕ್ಕೆ ಪ್ಯಾನ್ ಇಂಡಿಯಾ ಅಂತ ಕರೆಯೋಕೆ ಆರಂಭಿಸಿದರು. ಹಿಂದಿ ಭಾಷೆಯ ಚಿತ್ರಗಳನ್ನ ಪ್ಯಾನ್ ಇಂಡಿಯಾ ಅಂತ ಯಾಕೆ ಕರೆಯಲ್ಲ? ದಕ್ಷಿಣ ಭಾರತದ ಭಾಷೆಗಳಿಗೂ ಹಿಂದಿಯವರು ಡಬ್ ಮಾಡಿ ರಿಲೀಸ್ ಮಾಡುತ್ತಿದ್ದಾರೆ. ಆದರೆ, ಅವು ಓಡುತ್ತಿಲ್ಲ. ಆದರೆ, ಇಲ್ಲಿಂದ ಡಬ್ ಆದ ಚಿತ್ರಗಳು ಅಲ್ಲಿ ಓಡುತ್ತಿವೆ. ‘ಪುಷ್ಪ’, ‘ಕೆಜಿಎಫ್’.. ಇವರೆಲ್ಲಾ ಪ್ರಯತ್ನ ಪಟ್ಟರು. ಹೀಗಾಗಿ ಗೆದ್ದರು. ನನಗೆ ಅನಿಸುವ ಹಾಗೆ ‘ಆ’ ಪದವನ್ನು ಡಿಲೀಟ್ ಮಾಡಬೇಕು’ ಎಂದು ಸಂದರ್ಶನದಲ್ಲಿ ಕಿಚ್ಚ ಸುದೀಪ್ ಹೇಳಿದ್ದರು.

ಅಜಯ್ ದೇವ್ಗನ್ ಮಾಡಿದ್ದ ಟ್ವೀಟ್ ಏನು?
‘ನನ್ನ ಸಹೋದರ ಕಿಚ್ಚ ಸುದೀಪ್ ಅವರೇ, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ, ನಿಮ್ಮ ಮಾತೃ ಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆ ಆಗಿದ್ದು, ಇಂದು ಮತ್ತು ಎಂದೆಂದಿಗೂ ಆಗಿರುತ್ತದೆ. ಜನ ಗಣ ಮನ’ ಎಂದು ಅಜಯ್ ದೇವ್ಗನ್ ಟ್ವೀಟ್ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!