ಹೊಸದಿಗಂತ ವರದಿ, ವಿಜಯಪುರ:
ಭ್ರಷ್ಟರನ್ನು ಯಾವುದೇ ಒಂದು ಪಕ್ಷಕ್ಕೆ ಸೀಮಿತ ಮಾಡಬೇಡಿ, ಅವರು ಎಲ್ಲ ಕಡೆನೂ ಇದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ ಕುಮಾರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದನ್ನು ಬಹಳ ನಿರ್ಭಯವಾಗಿ, ನಿರ್ದಾಕ್ಷಿಣ್ಯವಾಗಿ ಹೇಳುವೆ. ಆದರೆ ನಮ್ಮ ದೌರ್ಭಾಗ್ಯ ಎಲ್ಲ ಪಕ್ಷದಲ್ಲಿ ಅನೇಕ ವೇಳೆ ಅವರದ್ದೇ ಮೇಲುಗೈ ಸಾಧಿಸುತ್ತಾರೆ ಎಂದರು.
ಪಿಎಸ್ಐ ಪರಿಕ್ಷೆಯಲ್ಲಿ ಅಕ್ರಮ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಈ ಕುರಿತು ನನಗೆ ಸಂಪೂರ್ಣ ಮಾಹಿತಿ ಇಲ್ಲ, ಆದರೆ ಆತುರ ಪಟ್ಟು ವ್ಯಾಖ್ಯಾನ ಮಾಡಬಾರದು ಎಂದರು.
ಅದರ ವಿಚಾರಣೆ ಇನ್ನೂ ಆಗಬೇಕು, ಅರೆ ಬರೆ ತಿಳಿದುಕೊಂಡು ಯಾರಾದರನ್ನು ಅಪಾದಿಸಬಾರದು. ಇಂತಹ ಘಟನೆ ನಡೆದಿದ್ದು, ಇದೊಂದು ನಾಗರಿಕ ಸಮಾಜಕ್ಕೆ ಅಪಮಾನ ಎಂದರು.
ಸಂವಿಧಾನದ ಅನ್ವಯ ಕಾನೂನು ಉಲ್ಲಂಘಿಸುವವರಿಗೆ ಶಿಕ್ಷೆ ಆಗಲೇ ಬೇಕು. ದೇಶ ಮುನ್ನಡಿಸಲು ಸಂವಿಧಾನ ಮಾಡಿದ್ದು, ಸಂವಿಧಾನದ ಪರಿಚ್ಚೇದದ ಅನ್ವಯ ವಿವಿಧ ಕಾನೂನು ಮಾಡಲಾಗಿದೆ. ಕಾನೂನು ಯಾರೇ ಉಲ್ಲಂಘಿಸಿದಾಗ ಅವರಿಗೆ ಶಿಕ್ಷೆ ಆಗಬೇಕು ಎಂದರು.
ಕಾನೂನು ಉಲ್ಲಂಘಿಸಿದವರಿಗೆ ಶಿಕ್ಷೆ ಆಗದಿದ್ದರೆ, ಕಾನೂನಿಗೆ ಏನು ಗೌರವ, ಸಂವಿಧಾನಕ್ಕೆ ಏನು ಗೌರವ. ಬಡವರಿಗೆ ಒಂದು, ಶ್ರೀಮಂತರಿಗೆ ಒಂದು ಕಾನೂನಾ ? ಬಲಾಢ್ಯರಿಗೊಂದು ದುರ್ಬಲರಿಗೊಂದು ಕಾನೂನಾ ? ಕಾನೂನು ಎಂಬುದು ಸರ್ವ ಶ್ರೇಷ್ಠ ಹಾಗೂ ಸಂವಿಧಾನ ಎಂಬುದು ಅಂತಿಮವಾಗಬೇಕು ಎಂದರು.
ದಲಿತ ಸಿಎಂ ವಿಚಾರ ಕುರಿತು ಪ್ರತಿಕ್ರಿಯಿಸಿ, ಲೆಕ್ಕ ಎಲ್ಲ ಚೆನ್ನಾಗಿರುತ್ತೆ ಆದರೆ ವಾಸ್ತವವಾಗಿ ಬೇರೆ ಇರುತ್ತೆ. ನಾನು ಆಕಾಂಕ್ಷಿಯಲ್ಲ, ಆದರೂ ದಲಿತ ಸಿಎಂ ಆದರೆ ಇನ್ನು ಖುಷಿ ಪಡುವೆ ಎಂದರು.