‘ಚೀನಾ ಮನಃಸ್ಥಿತಿಯ ಆಕ್ರಮಣಶೀಲʼ ಮನೋಭಾವದಿಂದ ಅಜಿತ್‌ ಹೊರಬರುವುದು ಒಳ್ಳೆಯದು: ಮಹಾ ಡಿಸಿಎಂಗೆ ಕುಮಾರಸ್ವಾಮಿ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮರಾಠಿ ಭಾಷಿಕರು ಇರುವ ಸ್ಥಳಗಳು ಮಹಾರಾಷ್ಟ್ರಕ್ಕೆ ಸೇರಿಸುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂಬ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ಕರ್ನಾಟಕ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಖಡಕ್ ತಿರುಗೇಟು ನೀಡಿದ್ದಾರೆ.
ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಹೆಚ್ ಡಿ ಕುಮಾರಸ್ವಾಮಿ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತೊಮ್ಮೆ ಉದ್ಧಟತನ ಮೆರೆದಿದ್ದಾರೆ. ಹಿಂದೆ; ಕರ್ನಾಟಕ & ಕನ್ನಡಿಗರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡಿದ್ದ ಅವರು, ಪುನಾ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಖಂಡನೀಯ ಎಂದು ಹೇಳಿದ್ದಾರೆ.

‘ಕರ್ನಾಟಕದ ಗಡಿಭಾಗದಲ್ಲಿ ಮರಾಠಿ ಭಾಷಿಗರು ಇರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ನಮ್ಮ ಸರ್ಕಾರದ ಬೆಂಬಲವಿದೆ ಎಂದು‌ ಪುಣೆಯಲ್ಲಿ ಅವರಿಂದು ʼಅಪರಿಪಕ್ವʼ ಹೇಳಿಕೆ ನೀಡಿದ್ದಾರೆ.‌ ಹಾಗೆ ನೋಡಿದರೆ, ಕನ್ನಡಿಗರೇ ಹೆಚ್ಚಿರುವ ಅನೇಕ ಪ್ರದೇಶಗಳು ಮಹಾರಾಷ್ಟ್ರಕ್ಕೂ ಸೇರ್ಪಡೆಯಾಗಿವೆ ಎಂಬುದನ್ನು ಪವಾರ್‌ ಮರೆಯಬಾರದು. 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. 1950ರಲ್ಲಿ ಭಾರತ ಗಣರಾಜ್ಯವಾಗಿ ಅವತರಿಸಿತು.

ಭಾಷಾವಾರು ಪ್ರಾಂತ್ಯಗಳು ರಾಜ್ಯಗಳಾದವು. ಸ್ವಾತಂತ್ರ್ಯದ ʼಅಮೃತ ಮಹೋತ್ಸವʼ ಈ ಕಾಲದಲ್ಲೂ ಅಜಿತ್‌ ಪವಾರ್‌ ಇನ್ನೂ ಗಡಿ ಬಗ್ಗೆಯೇ ಮಾತನಾಡುತ್ತಿದ್ದಾರೆ ಎಂದರೆ, ಅವರ ಮಿದುಳು ಹಿಮ್ಮುಖವಾಗಿ ಚಲಿಸುತ್ತಿರಬೇಕಷ್ಟೇ. ತಮ್ಮ ರಾಜ್ಯದ ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಗಡಿ ಜನರ ಬಗ್ಗೆ ಕಳಕಳಿಯೂ ಇಲ್ಲ. ಎಂದೋ ಮುಗಿದ ವಿಷಯ ಇಟ್ಟುಕೊಂಡು ʼರಾಜಕೀಯ ಪ್ರಹಸನʼ ನಡೆಸುತ್ತಿದ್ದಾರಷ್ಟೇ. ʼಚೀನಾ ಮನಃಸ್ಥಿತಿಯ ಆಕ್ರಮಣಶೀಲʼ ಮನೋಭಾವದಿಂದ ಅಜಿತ್‌ ಪವಾರ್‌ ಹೊರಬರುವುದು ಒಳ್ಳೆಯದು ಎಂದು ಹೇಳಿದ್ದಾರೆ.

‘ಸಹೋದರತ್ವ ಭಾವದಿಂದ ಬದುಕಬೇಕಾದ ಎರಡೂ ಭಾಷೆಗಳ ಜನರನ್ನು ದಿಕ್ಕು ತಪ್ಪಿಸಲು ಮತ್ತೆಮತ್ತೆ ಗಡಿ ವಿಷಯ ಕೆದಕುತ್ತಾ, ಆ ಗಡಿ ಪ್ರದೇಶಗಳು ಅಭಿವೃದ್ಧಿಯನ್ನೇ ಕಾಣದಂತೆ ನೋಡಿಕೊಳ್ಳುವ ರಾಜಕೀಯ ಹುನ್ನಾರವಷ್ಟೇ ಇದು. ಇಂಥ ಪ್ರವೃತ್ತಿ ಭಾರತದ ಐಕ್ಯತೆ & ಒಕ್ಕೂಟ ವ್ಯವಸ್ಥೆಗೇ ಗಂಡಾಂತರಕಾರಿ.

2006ರಲ್ಲಿ ಕೇಂದ್ರದ ಯುಪಿಎ ಸರಕಾರದಲ್ಲಿ ಗೃಹ ಸಚಿವರಾಗಿದ್ದ ತಮ್ಮದೇ ರಾಜ್ಯದ ನಾಯಕರನ್ನು ʼಕೀಲಿಕೈʼ ಮಾಡಿಕೊಂಡು ಇದೇ ಅಜಿತ್ ಪವಾರ್ʼರಂಥ ನಾಯಕರು ನಡೆಸಿದ ಕಿತಾಪತಿ ಕಾರಣಕ್ಕೆ, ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಾನು, ಅವರೆಲ್ಲರಿಗೂ ಸಡ್ಡು ಹೊಡೆದು ಬೆಳಗಾವಿಯಲ್ಲಿ ʼಸುವರ್ಣ ವಿಧಾನಸೌಧʼ ನಿರ್ಮಿಸುವ ಐತಿಹಾಸಿಕ ನಿರ್ಧಾರ ಕೈಗೊಂಡೆ.

ಬೆಳಗಾವಿ ಬಗ್ಗೆ ಬೇಳೆ ಬೇಯಿಸಿಕೊಳ್ಳುವ ʼಒಡಕು ಪ್ರವೃತ್ತಿʼಯನ್ನು ಮರಾಠಿ ನಾಯಕರು ಬಿಡಬೇಕು. ಇಲ್ಲವಾದರೆ, ದೇಶದ ಉದ್ದಗಲಕ್ಕೂ ಈಗಲೂ ಬೂದಿಮುಚ್ಚಿದ ಕೆಂಡದಂತಿರುವ ಇಂಥ ಸೂಕ್ಷ್ಮ ವಿಷಯಗಳು ಮುಂಚೂಣಿಗೆ ಬಂದು ದೇಶವೇ ಛಿದ್ರವಾಗುವ ಅಪಾಯವಿದೆ. ಇದನ್ನು ಅರ್ಥ ಮಾಡಿಕೊಂಡು, ಕೇಂದ್ರವು ಇಂಥ ʼಆಕ್ರಮಣಶೀಲʼ ಮನಃಸ್ಥಿತಿಯುಳ್ಳವರ ಕಿವಿ ಹಿಂಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.

ಎಲ್ಲ ಭಾಷಿಕರು ಎಲ್ಲ ರಾಜ್ಯಗಳಲ್ಲೂ ಇದ್ದಾರೆ. ಕರ್ನಾಟಕದಲ್ಲಿ ಮರಾಠಿ ಭಾಷಿಕರಿದ್ದಾರೆ. ಅವರ ಒಳಿತಿನ ಬಗ್ಗೆ ಅಜಿತ್ ಪವಾರ್ ಮಾತನಾಡಲಿ. ನಮ್ಮ ರಾಜ್ಯ ಸರಕಾರದ ಜತೆಯೂ ಚರ್ಚಿಸಲಿ. ಈ ನೆಲದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡಿಗರೇ ಎನ್ನುವ ವಿಶಾಲ ಭಾವ ನಮ್ಮದು. ಇದನ್ನು ಪವಾರ್ ಅರ್ಥ ಮಾಡಿಕೊಳ್ಳಬೇಕು ಎಂದು ಅಜಿತ್ ಪವಾರ್ ಗೆ ತಿರುಗೇಟು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!