ರಾಜ್ಯ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ: ಮಡಿಕೇರಿ ಜಿಲ್ಲಾ ಕಾಂಗ್ರೆಸ್ ಆರೋಪ

ಹೊಸದಿಗಂತ ವರದಿ ಮಡಿಕೇರಿ:

ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ರಾಜ್ಯದ ಜನರ ವಿಶ್ವಾಸವನ್ನೇ ಕಳೆದುಕೊಂಡಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್‌ ಆರೋಪಿಸಿದೆ.

ಗೋಣಿಕೊಪ್ಪದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅವರು, ಜನರ ತೆರಿಗೆಯ ಹಣವನ್ನು ಪೋಲು ಮಾಡುವ ನಿರಂತರ ಹಗರಣಗಳು ಮತ್ತು ಪೊಳ್ಳು ಭರವಸೆಗಳೇ ರಾಜ್ಯ ಸರಕಾರದ ನಿಜವಾದ ಸಾಧನೆಯಾಗಿದೆ. ಇದನ್ನು ಹೊರತುಪಡಿಸಿ ಸರಕಾರ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡುತ್ತಿಲ್ಲ ಎಂದು ಟೀಕಿಸಿದರು.ಕಳೆದ ಹಲವು ತಿಂಗಳುಗಳಿಂದ ರಾಜ್ಯದಲ್ಲಿ ಒಂದಲ್ಲ ಒಂದು ಹಗರಣಗಳು ನಿರಂತರವಾಗಿ ನಡೆಯುತ್ತಿವೆ. ಪಿಎಸ್ಐ ಅಕ್ರಮ ಪರೀಕ್ಷೆ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಹಗರಣ ಎಂದೇ ಹೇಳಬಹುದು. ಇದರಿಂದ ದೇಶದ ಮುಂದೆ ಕರ್ನಾಟಕ ರಾಜ್ಯ ತಲೆತಗ್ಗಿಸುವಂತಾಗಿದೆ. ಅಲ್ಲದೆ ಕೆಪಿಎಸ್ಸಿ ಯ ವಿಶ್ವಾಸಾರ್ಹತೆಗೆ ಕೂಡಾ ಕಳಂಕ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟು ತಿಂಗಳುಗಟ್ಟಲೆ ಶ್ರಮಪಟ್ಟು ಪಿಎಸ್ಐ ಪರೀಕ್ಷೆಗೆ ತಯಾರು ಮಾಡಿಕೊಂಡಿದ್ದ ಅಭ್ಯರ್ಥಿಗಳ ಭವಿಷ್ಯ ಇದೀಗ ನೀರುಪಾಲಾಗಿದೆ. ಪಿಎಸ್ಐ ಪರೀಕ್ಷೆಯ ಅಭ್ಯರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ ರಾಜ್ಯ ಸರಕಾರ ಕೇವಲ ಹಣ ದೋಚುವ ಏಕೈಕ ಉದ್ದೇಶದಿಂದಲೇ ಅಕ್ರಮ ನೇಮಕಾತಿಗಳನ್ನು ಮಾಡುತ್ತಿದೆ. ಈ ಹಗರಣದಲ್ಲಿ ಹಾಲಿ ಸಚಿವರ ಸಂಬಂಧಿಯೊಬ್ಬರ ಹೆಸರು ಕೇಳಿ ಬರುತ್ತಿದ್ದು, ಇದರಿಂದ ಸರಕಾರ ಈ ಹಗರಣದಲ್ಲಿ ನೇರವಾಗಿ ಶಾಮೀಲಾಗಿರುವುದು ದೃಢಪಟ್ಟಿದೆ ಎಂದು ಆರೋಪಿಸಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಎಲ್ಲಾ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ ಧರ್ಮಜ ಉತ್ತಪ್ಪ ಅವರು, ಈ ಸರಕಾರದ ಅವಧಿಯಲ್ಲಿ ನಡೆದ ಎಲ್ಲಾ ನೇಮಕಾತಿಗಳ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ರೈತರ 10 ಹೆಚ್. ಪಿ. ಮೋಟರ್ ಪಂಪ್’ಸೆಟ್’ಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಘೋಷಿಸಿದ್ದರು. ಅದು ಇನ್ನೂ ಜಾರಿಯಾಗಿಲ್ಲ. ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿ ಬಿಟ್ಟಿ ಪ್ರಚಾರ ಪಡೆದುಕೊಂಡ ಮುಖ್ಯಮಂತ್ರಿಗಳಿಗೆ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ನೈತಿಕತೆಯಿಲ್ಲ. ಅಲ್ಲದೆ, ಈ ಕುರಿತು ಜಿಲ್ಲೆಯಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಜಿಲ್ಲೆಯ ಇಬ್ಬರು ಶಾಸಕರ ಪ್ರಭಾವ ಏನು ಎಂಬುದು ಇದೀಗ ಕೊಡಗಿನ ಜನರಿಗೆ ತಿಳಿದಂತಾಗಿದೆ ಎಂದು ಹೇಳಿದರು.

ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸಲು ಮತ್ತು ವೈಫಲ್ಯಗಳನ್ನು ಖಂಡಿಸಿ ಪ್ರತಿರೋಧಿಸುವ ಹಿನ್ನೆಲೆಯಲ್ಲಿ ಮೇ 10ರ ನಂತರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಜನಜಾಗೃತಿ ಮತ್ತು ಪ್ರತಿಭಟನಾ ಕಾರ್ಯಕ್ರಮಗಳನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ಜೋಯಪ್ಪ, ಜಿ. ಪಂ. ಮಾಜಿ ಸದಸ್ಯ ಕೆ. ಎಂ. ಬಾಲಕೃಷ್ಣ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಮುಖ್ಯಸ್ಥ ಸೂರಜ್ ಹೊಸೂರು, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ರೋಶನ್ ಗಣಪತಿ ಅವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!