ಮೈಸೂರಿನಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿ

ಹೊಸ ದಿಗಂತ ವರದಿ, ಮೈಸೂರು:

ಅರಮನೆ ನಗರಿ ಮೈಸೂರಿನಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಪ್ಲಾಂಟ್ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದಾಗಿ ಮೈಸೂರಿನಲ್ಲಿ ಮತ್ತಷ್ಟು ಉದ್ಯೋಗ ಸೃಷ್ಠಿಯಾಗಲಿದೆ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಮೈಸೂರಿನ ರಾಜವಂಶಸ್ಥ ಯದುವೀರ್, ಬಿಜೆಪಿಯ ಮುಖಂಡರು ಸ್ವಾಗತಿಸಿದ್ದಾರೆ.
ಮೈಸೂರಿನಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಪ್ಲಾಂಟ್ ಸ್ಥಾಪಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿರುವ ಮೈಸೂರು ರಾಜವಂಶಸ್ಥ ಯದುವೀರಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಐಟಿಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ರೂ.22,900 ಕೋಟಿ ($3 ಬಿಲಿಯನ್) ಹೂಡಿಕೆಯೊಂದಿಗೆ, ರಾಜ್ಯದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಸ್ಥಾವರವನ್ನು ಸ್ಥಾಪಿಸಲು ಇಸ್ರೇಲ್ ಮೂಲದ ಐಎಸ್‌ಎಂಸಿ ಕನ್ಸೋರ್ಟಿಯಂ ಅನಲಾಗ್ ಫ್ಯಾಬ್ ಪ್ರೆöÊವೇಟ್ ಲಿಮಿಟೆಡ್ ನೊಂದಿಗೆ ಎಂಒಯುಗೆ ಸಹಿ ಹಾಕಲಾಗಿದ್ದು, ಆ ಸ್ಥಾವರವನ್ನು ಮೈಸೂರಿನಲ್ಲಿ ಸ್ಥಾಪಿಸಲಾಗುತ್ತಿದೆ.
ಕರ್ನಾಟಕ ಸರ್ಕಾರವು ಮೈಸೂರಿನಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಸ್ಥಾಪಿಸಲು ಐಎಸ್‌ಎಂಸಿ ಕನ್ಸೋರ್ಟಿಯಂ ಅನ್ನು ತರುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಮೈಸೂರು ಉದ್ಯಮದ ಶ್ರೀಮಂತ ಪರಂಪರೆಯನ್ನು ಹೊಂದಿದೆ ಮತ್ತು ಆರ್ಥಿಕ ಚಾಲನೆಗೆ ಪ್ರಚೋದನೆಯನ್ನು ನೀಡುತ್ತದೆ. ಈ ಉಪಕ್ರಮವು ದೇಶ, ರಾಜ್ಯ ಮತ್ತು ಸ್ಥಳೀಯವಾಗಿ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕೆಡಿಇಎಂ ಮೂಲಕ ಈ ಬೆಳವಣಿಗೆ ಮತ್ತು ಉಪಕ್ರಮಗಳನ್ನು ತಂದ ಐಟಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರನ್ನು ನಾನು ಅಭಿನಂದಿಸುತ್ತೇನೆ’ ಎಂದು ಹೇಳಿದ್ದಾರೆ.
ಸಿಗಲಿದೆ ಹೆಚ್ಚಿನ ಉದ್ಯೋಗವಾಶ 
ರಾಜ್ಯದಲ್ಲಿ ಸೆಮಿ ಕಂಡಕ್ಟರ್ ತಯಾರಿಕೆಯ ಮೊದಲ ಉದ್ಯಮವು ಮೈಸೂರಿನಲ್ಲಿ ಸ್ಥಾಪನೆಯಾಗುತ್ತಿರುವುದಕ್ಕೆ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದ್ದು, ಭಾರತದ ಬೆಳವಣಿಗೆಗೆ ಅತ್ಯವಶ್ಯಕವಾದ ಸೆಮಿಕಂಡಕ್ಟರ್ ಉದ್ಯಮ ಮೈಸೂರಿನಲ್ಲಿ ಸ್ಥಾಪನೆಯಾಗುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಭಾರತವು 10 ಟ್ರಿಲಿಯನ್ ಇಕಾನಮಿ ಆಗುವ ನಿರೀಕ್ಷೆ ಫಲ ಕೊಡುವ ನಿಟ್ಟಿನಲ್ಲಿ ಶಕ್ತಿತುಂಬುವ ಕೆಲಸ ಇದರಿಂದ ಆಗಲಿದೆ. ಸುಮಾರು 22,900 ಕೋಟಿ ರೂ ಹೂಡಿಕೆ ಆಗಲಿದ್ದು, ಮೈಸೂರು ಭಾಗದಲ್ಲಿ ಹೆಚ್ಚಿನ ಉದ್ಯೋಗಗಳ ಸೃಷ್ಠಿಗೂ ಅವಕಾಶವಾಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೈಸೂರಿನ ಯುವ ಜನತೆಗೆ ಅನುಕೂಲ
ದೇಶದಲ್ಲೇ ಮೊಟ್ಟ ಮೊದಲ ಸೆಮಿ ಕಂಡಕ್ಟರ್ ಉತ್ಪಾಧನಾ ಘಟಕವನ್ನು ಮೈಸೂರಿನಲ್ಲಿ ಸ್ಥಾಪಿಸಲು ಮುಂದಾಗಿರುವ ಕ್ರಮ ಐತಿಹಾಸಕವಾಗಿದೆ. ಇದರಿಂದ ಯುವ ಜನತೆಗೆ ಅನುಕೂಲವಾಗಲಿದೆ ಎಂದು ಮೈಸೂರು ಬಿಜೆಪಿ ಗ್ರಾಮಾಂತರ ಜಿಲ್ಲಾ ಸಹ ವಕ್ತಾರ ಡಾ.ಕೆ.ವಸಂತ್ ಕುಮಾರ್ ಹೇಳಿದರು.
ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡುತ್ತಿದೆ. ಯುವ ಜನತೆಗೆ ಉದ್ಯೋಗ ಸೃಷ್ಠಿಸುವ ನಿಟ್ಟಿನಲ್ಲಿ ಹಲವು ಮಹತ್ತರ ಯೋಜನೆಗಳು, ಉದ್ಯಮಗಳನ್ನು ಸ್ಥಾಪಿಸಿದೆ. ಪ್ರಸ್ತುತ ದೇಶದಲ್ಲಿ ಮೊಟ್ಟ ಮೊದಲ ಸೆಮಿ ಕಂಡಕ್ಟರ್ ಯೂನಿಟ್ ಘಟಕವನ್ನು ಮೈಸೂರಿನಲ್ಲಿ ಸ್ಥಾಪಿಸಲು ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದರು.
ರಾಜ್ಯ ಸರ್ಕಾರ ಐಎಸ್‌ಎಂಸಿ ಕನ್ಸೋರ್ಟಿಯಂ ಅನಲಾಗ್ ಫ್ಯಾಬ್ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿoದ 3 ಮಿಲಿಯನ್ ಡಾಲರ್ ಹೂಡಿಕೆಯಾಗಲಿದ್ದು, ಸುಮಾರು 1500 ಜನರಿಗೆ ಉದ್ಯೋಗವಕಾಶ ದೊರೆಯಲಿದ್ದು, ಇದರಿಂದಾಗಿ ವಿಶ್ವದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮೈಸೂರು ಗಮನ ಸೆಳೆಯಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಕೌಶಲ್ಯಯುಕ್ತ ಶಿಕ್ಷಣದ ಮೂಲಕ ಉದ್ಯೋಗ ಸೃಷ್ಠಿಸುವಲ್ಲಿ ಸೆಮಿ ಕಂಡಕ್ಟರ್ ಯೂನಿಟ್ ಮಹತ್ವದಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ದೇಶದ ಅಭಿವೃದ್ಧಿಯ ದೂರದೃಷ್ಠಿ ಇದಾಗಿದೆ. ಸೆಮಿಕಂಡಕ್ಟರ್ ಎಂದರೆ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು, ಆಟೋ ಮೊಬೈಲ್‌ಗಳಲ್ಲಿ ಬಳಸುವ ಚಿಪ್ ರೀತಿಯ ಸಾಧನಗಳಾಗಿವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ 2 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡಲಾಗಿ, ರೈತರಿಂದ ಬೇಡಿಕೆ ಬಂದ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ 1.14 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ನಿರ್ಧರಿಸಿ, 485 ಕೋಟಿ ರೂ ಹಣ ಬಿಡುಗಡೆ ಮಾಡಿ, ರೈತರ ಬೆನ್ನಿಗೆ ನಿಂತಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!