ಹೊಸ ದಿಗಂತ ವರದಿ, ವಿಜಯನಗರ:
ರಾಜ್ಯದಲ್ಲಿ ಸಂಚಲನ ಮೂಡಿಸಿದ ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪಾರದರ್ಶಕವಾಗಿ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ನ ತಲೆಗಳೇ ಹೆಚ್ಚು ಉರುಳಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಹೇಳಿದರು.
ನಗರದ ಸಿದ್ದಿಪ್ರೀಯಾ ಮಂಗಲ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಅವಲೊಕನಾ ಹಾಗೂ ಅಭಿನಂದನಾ ಸಮಾರಂಭದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ, ಅನೇಕ ಜನ ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ, ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ಎಷ್ಟೇ ಪ್ರಭಾವಿಗಳಿರಲಿ ಮುಲಾಜಿಲ್ಲದೇ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಇದರಲ್ಲಿ ಯಾರನ್ನೂ ರಕ್ಷಿಸುವ ಮಾತೇ ಇಲ್ಲ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ಅಕ್ರಮಗಳು ನಡೆದಿವೆ, ಆರೋಪಗಳು ಕೇಳಿ ಬಂದಾಗ ಯಾವದನ್ನೂ ತನಿಖೆಗೆ ಒಳಪಡಿಸಲು ಮುಂದಾಗಿಲಿಲ್ಲ, ಕಾಂಗ್ರೆಸ್ ಅವದಿಯಲ್ಲೇ ಅತಿಹೆಚ್ಚು ಭಯೋತ್ಪಾದಕ, ನಕ್ಸಲ್ ಚಟುವಟಿಕೆಗಳು ನಡೆದಿವೆ, ಕಾಂಗ್ರೆಸ್ ನವರು ಅಕ್ರಮ ದಂಧೆಯಲ್ಲಿ ನಿಶ್ಚೀಮರು, ಈ ಪ್ರಕರಣದಲ್ಲಿ ಕಾಂಗ್ರೆಸ್ ತಲೆಗಳೇ ಹೆಚ್ಚು ಉರುಳಲಿವೆ ಎಂದರು.
ದೇಶದಲ್ಲಿ ನಮ್ಮ ಸರ್ಕಾರ ಜನೊರ ಆಡಳಿತ ನೀಡುತ್ತಿದೆ. ಪ್ರಧಾನಿ ಮೋದಿಜೀ ಅವರ ಉತ್ತಮ ಕಾರ್ಯವೈಖರಿಗೆ ದೇಶವಷ್ಟೇ ಅಲ್ಲ, ವಿಶ್ವದ ಜನರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150+ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಮತ್ತೆ ನಮ್ಮ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ, ಇದರಲ್ಲಿ ಅನುಮಾನಬೇಡ ಎಂದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜನಪರ ಉತ್ತಮ ಆಡಳಿತ ನೀಡುತ್ತಿದ್ದಾರೆ, ಹೀಗಿರುವಾಗ ನಾಯಕತ್ವದ ಬದಲಾವಣೆ ಪ್ರಶ್ನೆಯೇ ಇಲ್ಲ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಗಳ ವಿವೇಚನೆಗೆ ಬಿಟ್ಟದ್ದು, ಈ ಕುರಿತು ಹೆಚ್ಚು ಮಾತನಾಡೋಲ್ಲ ಎಂದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಮಹೇಶ್ ತೆಂಗಿನಕಾಯಿ, ಅಶ್ವಥ್ ನಾರಾಯಣ್, ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್ ಇತರರಿದ್ದರು.