ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಗೊಂದಲದ ಹೇಳಿಕೆ : ಗೋವಿಂದ ಕಾರಜೋಳ

ಹೊಸ ದಿಗಂತ ವರದಿ, ಚಿತ್ರದುರ್ಗ :

ಸಿದ್ದರಾಮಯ್ಯ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಹಾಗಾಗಿ ತಮ್ಮ ತಪ್ಪು ಮುಚ್ಚಿಕೊಳ್ಳಲು, ಜನರನ್ನು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು.
ಚಿತ್ರದುರ್ಗದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ 56 ವರ್ಷಗಳ ಸುದೀರ್ಘ ಕಾಲ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಆದರೆ ದೇಶದಲ್ಲಿ ಇನ್ನೂ ಅನೇಕ ಜ್ವಲಂತ ಸಮಸ್ಯೆಗಳಿವೆ. ಅವರ ವೈಫಲ್ಯತೆಯನ್ನು ಮರೆಮಾಚಲು ಅನಗತ್ಯವಾಗಿ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುತ್ತಾರೆ ಎಂದರು.
ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ವರ್ತನೆ ಕುರಿತು ಪ್ರತಿಕ್ರಿಯಿಸಿದ ಅವರು, ಕೆಟ್ಟವರು ಎಲ್ಲಾ ಕಡೆ ಇದ್ದಾರೆ. ಕಾಂಗ್ರೆಸ್ ಅವಧಿಯಲ್ಲೂ ಹಗರಣಗಳು ನಡೆದಿವೆ. ಈಗ ನಡೆದಿರುವ ಪಿಎಸ್‌ಐ ಪರೀಕ್ಷಾ ಅಕ್ರಮ ಕುರಿತು ಪ್ರಕರಣ ಬಯಲಿಗೆಳೆದಿದ್ದಾರೆ. ಪ್ರಕರಣಕ್ಕೆ ಅನೇಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಆರಂಭದಲ್ಲಿ ಪ್ರಕರಣ ಕುರಿತು ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಆರೋಪ ಮಾಡಿದರು. ಇತ್ತೀಚೆಗೆ ಕಾಂಗ್ರೆಸ್‌ನ ಹಲವರ ಹೆಸರುಗಳು ಪ್ರಕರಣದಲ್ಲಿ ಕೇಳಿಬರುತ್ತಿವೆ. ಹಾಗಾಗಿ ಕಾಂಗ್ರೆಸ್ ಪಕ್ಷದವರು ಅನಗತ್ಯವಾಗಿ ಬಿಜೆಪಿ ವಿರುದ್ಧ ಆರೋಪ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿದರು.
ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಬಡವರ ಪರವಾದ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಆದಾಗ್ಯೂ ಕಾಂಗ್ರೆಸ್‌ನವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಗಾಳಿ ಮಾತುಗಳಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದರು.
ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯವರು ಆಗಾಗ ಉಪಟಳ ಮಾಡುತ್ತಿರುತ್ತಾರೆ. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು, ಯಾವುದೇ ಕಾರಣಕ್ಕೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ರಾಜ್ಯದ ನೆಲ-ಜಲದ ಸಮಸ್ಯೆ ಬಂದಾಗ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!