ಹೊಸದಿಗಂತ ವರದಿ,ವಿಜಯನಗರ:
ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಶುಕ್ರವಾರ ಸಂಜೆ 5.50ಕ್ಕೆ ಮರುಳಸಿದ್ದೇಶ್ವರ ಮಹರಾಜಕ್ಕೂ ಜೈ ಎಂಬ ಸಾವಿರಾರು ಭಕ್ತರ ಮಧ್ಯೆ ಜಯಘೋಷದೊಂದಿಗೆ ಅದ್ದೂರಿಯಾಗಿ ಜರುಗಿತು.
ಕರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ರದ್ದಾದ ಹಿನ್ನಲೆಯಲ್ಲಿ ಈ ವರ್ಷ ಸಾವಿರಾರು ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು.
ಆದರೆ ಸಂಜೆ ನಾಲ್ಕು ಗಂಟೆ ಸಮಯಕ್ಕೆ ವಿಪರೀತ ಗಾಳಿ, ಮಿಂಚು,ಸಿಡಿಲಿನ ಆರ್ಭಟ ಹೆಚ್ಚಾಗಿ, ತುಂತುರು ಮಳೆ ಆರಂಭವಾದ ಕಾರಣ ಭಕ್ತರಲ್ಲಿನ ಉತ್ಸಾಹವನ್ನು ಕೊಂಚ ಮಟ್ಟಿಗೆ ಕುಗ್ಗಿಸಿತ್ತು.
ನಂತರ ಗಾಳಿ, ಮಿಂಚು ಇದ್ದಕ್ಕಿದ್ದಂತೆ ಕಡಿಮೆಯಾದ ಕಾರಣ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಶ್ರೀ ಪೀಠದಿಂದ ಉತ್ಸವ ಮೂರ್ತಿಯೊಂದಿಗೆ ಆಗಮಿಸಿ ಉತ್ಸವ ಮೂರ್ತಿಯನ್ನು ರಥದಲ್ಲಿ ಸ್ಥಾಪಿಸಿದ ಮೇಲೆ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ಅಪ್ಪಣೆ ಮೇರೆಗೆ ರಥೋತ್ಸವ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಜರುಗಿತು.
ರಥೋತ್ಸವ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ಅಪ್ಪು ಪೋಟೋ ಗಳನ್ನು ಪ್ರದರ್ಶಿಸಿ ಅಗಲಿದ ನೆಚ್ಚಿನ ನಾಯಕನಿಗೆ ನಮನ ಸಲ್ಲಿಸಿದರು.
ಪೊಲೀಸರು ಬಿಗಿ ಬಂದೋಬಸ್ತ ಮಾಡಿದ್ದರು,
ರಥೋತ್ಸವವು ರಾಜಗಾಂಭೀರ್ಯದಿಂದ ಪಾದಗಟ್ಟೆಯವರೆಗೆ ಸಾಗಿ ಮತ್ತೆ ಭಕ್ತರು ಮರಳಿ ಜಯಘೋಷದೊಂದಿಗೆ ರಥವನ್ನು ಎಳೆಥಂದು ಮೂಲ ಸ್ಥಾನಕ್ಕೆ ನಿಲ್ಲಿಸಿ, ಹರ್ಷೋದ್ಗಾರದೊಂದಿಗೆ ಭಕ್ತಿ ಸಮರ್ಪಿಸಿದರು.
ನಂತರ ಶ್ರೀ ಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆಯೊಂದಿಗೆ ಮೂರ್ತಿಯನ್ನು ತಂದು ಗರ್ಭಗುಡಿಯಲ್ಲಿ ಸ್ಥಾಪಿಸಿದರು,ನಂತರ ಶ್ರೀ ಸ್ವಾಮಿಗೆ ಮಹಾಮಂಗಳಾರತಿ ಮಾಡುವ ಮೂಲಕ ರಥೋತ್ಸವದ ಕೈಂಕಾರ್ಯಗಳಿಗೆ ವಿರಾಮ ನೀಡಲಾಯಿತು.