Thursday, June 30, 2022

Latest Posts

ಕರ್ನಾಟಕ ಮಹಿಳಾ ಸೀನಿಯರ್ ಹಾಕಿ ತಂಡಕ್ಕೆ ಕೊಡಗಿನ ಮರದಾಳು ಯಶಿಕಾ ಆಯ್ಕೆ

ಹೊಸದಿಗಂತ ವರದಿ, ಮಡಿಕೇರಿ:

ಕರ್ನಾಟಕ ಮಹಿಳಾ ಸೀನಿಯರ್ ಹಾಕಿ ತಂಡಕ್ಕೆ ಕೊಡಗಿನ ಮರದಾಳು ಯಶಿಕಾ ಆಯ್ಕೆಯಾಗಿದ್ದಾರೆ.
ಭೂಪಾಲ್‍ನಲ್ಲಿ ಮೇ 6ರಿಂದ ಆರಂಭಗೊಂಡಿರುವ ಹಾಕಿ ಪಂದ್ಯಾವಳಿಯಲ್ಲಿ ಮಹಿಳಾ ಸೀನಿಯರ್ ಹಾಕಿ ತಂಡವನ್ನು ಅವರು ಪ್ರತಿನಿಧಿಸುತ್ತಿದ್ದಾರೆ.
8 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಗಲೇ ಯಶಿಕಾ ಮೊದಲ ಪಂದ್ಯವನ್ನು ಜಾರ್ಖಂಡ್’ನ ಕರಾಚಿಯಲ್ಲಿ ಆಡಿದ್ದರು. ನಂತರದ ದಿನಗಳಲ್ಲಿ ದೆಹಲಿ, ಪಂಜಾಬ್, ಒರಿಸ್ಸಾ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 20ಕ್ಕೂ ಹೆಚ್ಚು ಬಾರಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿರುವ ಇವರು ಇಲ್ಲಿಯವರೆಗೆ ಸುಮಾರು 63ಕ್ಕೂ ಅಧಿಕ ಪದಕಗಳನ್ನು ಗೆದ್ದಿದ್ದಾರೆ. ನಾಯಕಿಯಾಗಿಯೂ ಒಂದು ವರ್ಷ ಕಾಲ ಕರ್ನಾಟಕ ತಂಡವನ್ನು ಮುನ್ನಡೆಸಿದ್ದಾರೆ.
2020ರಲ್ಲಿ ಚೆನ್ನೈನಲ್ಲಿ ನಡೆದ ಸೌತ್‍ ಝೋನ್ ಕ್ರೀಡಾಕೂಟ, ಪೊನ್ನಂಪೇಟೆಯಲ್ಲಿ ನಡೆದ ವಿಶ್ವ ವಿದ್ಯಾನಿಲಯ ಮಟ್ಟದ ಸೌತ್ ಝೋನ್ ಪಂದ್ಯಾವಳಿಯಲ್ಲಿ ಇವರು ಪ್ರತಿನಿಧಿಸಿದ್ದ ತಂಡ ಜಯ ಸಾಧಿಸಿದೆ.
ರಾಜಸ್ಥಾನದಲ್ಲಿ ನಡೆದ ಆಲ್ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಯಶಿಕಾ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದು, ತಂಡ ಬೆಳ್ಳಿ ಪದಕ ಪಡೆದುಕೊಂಡಿದೆ. ಈ ಪಂದ್ಯಾವಳಿಯಲ್ಲಿ ಇವರು ದಾಖಲೆಯ 8 ಗೋಲುಗಳನ್ನು ಬಾರಿಸಿ ಯಶಸ್ವಿ ಹಾಕಿಪಟು ಎನಿಸಿಕೊಂಡಿದ್ದಾರೆ.
ಫಾರ್ವರ್ಡ್ ಆಟಗಾರ್ತಿ ಮತ್ತು ಮುಖ್ಯ ಸ್ಟೈಕರ್ ಆಗಿ ಪ್ರತಿನಿಧಿಸಿಯೂ ಯಶಸ್ವಿಯಾಗಿದ್ದಾರೆ. ಇಲ್ಲಿಯವರೆಗೆ ಯಶಿಕಾ ಒಟ್ಟು 45 ಕ್ಕೂ ಹೆಚ್ಚು ಗೋಲುಗಳನ್ನು ದಾಖಲಿಸಿದ್ದಾರೆ.
ಚೆಟ್ಟಳ್ಳಿಯ ಚೇರಳ ಗ್ರಾಮ (ನೆಲ್ಲಿಹಡ್ಲು)ದ ನಿವಾಸಿ ಮರದಾಳು ಗೋಪಾಲ (ವಿಠಲ) ಹಾಗೂ ನಾಗರತ್ನ ಅವರ ಪುತ್ರಿಯಾಗಿರುವ ಮರದಾಳು ಯಶಿಕಾ ಚೆಟ್ಟಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಪೊನ್ನಂಪೇಟೆ ಸಾಯಿ ಹಾಕಿ ಕೇಂದ್ರಕ್ಕೆ ಸೇರ್ಪಡೆಯಾಗಿ 8 ರಿಂದ 10 ನೇ ತರಗತಿವರೆಗೆ ಪೂರೈಸಿದರು. ಮೈಸೂರಿನ ಟೆರೇಷಿಯನ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬಿಎ ವಿದ್ಯಾಭ್ಯಾಸದ ಜೊತೆಗೆ ಹಾಕಿ ಪಂದ್ಯಾವಳಿಗೆ ಯಶಿಕಾ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss