ಭಗ್ನಪ್ರೇಮಿಯ ಪ್ರೇಮವೈಫಲ್ಯದ ಕಿಚ್ಚಿಗೆ ಏಳು ಅಮಾಯಕರು ಸಜೀವ ದಹನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಧ್ಯಪ್ರದೇಶದ ಇಂದೋರ್ ನ ವಿಜಯ್ ನಗರ ಪ್ರದೇಶದ ಶನಿವಾರ ಮೂರು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತ ಏಳು ಜನರನ್ನು ಬಲಿಪಡೆದಿತ್ತು. ಆಕಸ್ಮಿಕ ಅಗ್ನಿ ಅವಘಡ ಎಂದು ಹೇಳಲಾದ ಪ್ರಕರಣ ಈಗ ಬೇರೆಯದ್ದೇ ತಿರುವು ಪಡೆದಿದೆ. ಈ ಭೀಕರ ಅಗ್ನಿ ದುರಂತದ ಹಿಂದೆ ಪ್ರೇಮ ವೈಫಲ್ಯದ ಕಿಚ್ಚು ಅಡಗಿರುವುದು ಬೆಳಕಿಗೆ ಬಂದಿದೆ. ಪ್ರೇಮ ನಿರಾಕರಣೆಯಿಂದ ನೊಂದ ಭಗ್ನಪ್ರೇಮಿಯೊಬ್ಬ ಪ್ರಿಯತಮೆಯ ವಾಹನಕ್ಕೆ ಹಚ್ಚಿದ ಬೆಂಕಿ, ಇಡೀ ವಸತಿ ಸಮುಚ್ಛಯಕ್ಕೆ ಹಬ್ಬಿ 7 ಜನರನ್ನು ಬಲಿಪಡೆದುಕೊಂಡಿದೆ. 9 ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. 3 ಮಹಡಿ ಕಟ್ಟಡದಲ್ಲಿ ಶನಿವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತ್ತು. ನಿದ್ದೆಯ ಮಂಪರಿನಲ್ಲಿದ್ದ ಜನರಿಗೆ ಅರಿವಾಗುವುದರ ಒಳಗೆ ಇಡೀ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿತ್ತು.
ಕಟ್ಟಡದಲ್ಲಿ ವಿನಾಶಕಾರಿ ಬೆಂಕಿ ಉಂಟುಮಾಡಿ 7 ಜೀವಗಳ ಸಾವಿಗೆ ಕಾರಣವಾದ ಆರೋಪದ ಮೇಲೆ ಶನಿವಾರ ತಡರಾತ್ರಿ 27 ವರ್ಷದ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಶುಭಂ ದೀಕ್ಷಿತ್(27) ತನ್ನನ್ನು ತಿರಸ್ಕರಿಸಿದ ಮಹಿಳೆಗೆ ಸೇರಿದ ವಾಹನವನ್ನು ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ದೀಕ್ಷಿತ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತನಿಖೆಗೆ ಆದೇಶಿಸಿದ್ದಾರೆ ಮತ್ತು ಮೃತರ ಮುಂದಿನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!