ಹೊಸ ದಿಗಂತ ಡಿಜಿಟಲ್ ಡೆಸ್ಕ್
ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧ ನಕಲಿ ಜಾತಿ ಪ್ರಮಾಣ ಪತ್ರ ಆರೋಪದ ವಿರುದ್ಧ ಸಮರವನ್ನೇ ಸಾರಿದ್ದಕ್ಕಾಗಿ, ಐಪಿಎಸ್ ಅಧಿಕಾರಿ ಡಾ.ಪಿ.ರವೀಂದ್ರನಾಥ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಈ ನಡೆಯಿಂದ ಬೇಸರಗೊಂಡಿರುವ ತರಬೇತಿ ವಿಭಾಗ ಡಿಜಿಪಿ ಡಾ.ಪಿ.ರವೀಂದ್ರನಾಥ್ ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಕಲಿ ಜಾತಿ ಪ್ರಮಾಣ ಪತ್ರದಲ್ಲಿ ಸಮರವನ್ನೇ ಸಾರಿದ್ದೆ. ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರಿಗೆ ನೋಟಿಸ್ ನೀಡಲಾಗಿತ್ತು. ಅವರು ತಮ್ಮ ವಕೀಲರ ಮೂಲಕ ನೋಟಿಸ್ ಗೆ ಉತ್ತರ ನೀಡಿ 10 ದಿನಗಳ ಕಾಲಾವಕಾಶ ಕೇಳಿದ್ದರು. ಈ ಹಂತದಲ್ಲಿಯೇ ನನ್ನ ವರ್ಗಾವಣೆ ಮಾಡಿದ್ದು ಬೇಸರ ತಂದಿತ್ತು ಎಂದರು.
ನೋಟಿಸ್ ನೀಡಿದ್ದರ ಹಿಂದೆ ನನ್ನ ಯಾವುದೇ ಪಾತ್ರವಿರಲಿಲ್ಲ. ಈ ಪ್ರಕರಣದಲ್ಲಿ ನನ್ನ ಯಾವುದೇ ಕೈವಾಡವೂ ಇಲ್ಲ. ಹೀಗಿದ್ದೂ ನನ್ನ ವರ್ಗಾವಣೆಯಿಂದ ನನ್ನ ಬಗ್ಗೆ ಜನರಿಗೆ ತಪ್ಪು ಸಂದೇಶ ಹೋಗಬಾರದು. ಈ ಎಲ್ಲಾ ಕಾರಣದಿಂದಾಗಿ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.
ಐಪಿಎಸ್ ಅಧಿಕಾರಿ ಡಾ.ರವೀಂದ್ರನಾಥ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದು ಇದು ನಾಲ್ಕನೇ ಬಾರೀ . ಈ ಹಿಂದೆ ಮೂರು ಬಾರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.