ನದಿ ಪಾತ್ರದ ನಿವಾಸಿಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ಜಿ.ಪಂ. ಸಿಇಒ ಸೂಚನೆ

ಹೊಸದಿಗಂತ ವರದಿ ಮಡಿಕೇರಿ:

ಮಳೆಗಾಲ ಸನಿಹದಲ್ಲಿದ್ದು, ನದಿ ಪಾತ್ರದಲ್ಲಿನ ಜನಸಾಮಾನ್ಯರ ಬಗ್ಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಕೊಡಗು ಜಿಲ್ಲಾ ಪಂಚಾಯತ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯ ನೆಲ್ಲಿಹುದಿಕೇರಿ ಮತ್ತು ಸಿದ್ದಾಪುರ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದ ಅವರು, ಮಳೆಗಾಲ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುಹ್ಯ ನದಿ ಪಾತ್ರದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮಳೆಗಾಲ ಸಂದರ್ಭದಲ್ಲಿ ಜನ ಜಾನುವಾರುಗಳ ಪ್ರಾಣ ಹಾನಿಯಾಗದಂತೆ ಎಚ್ಚರವಹಿಸುವಂತೆ ಮತ್ತು ಅಗತ್ಯ ತಯಾರಿಗಳನ್ನು ಶೀಘ್ರವೇ ಆರಂಭಿಸುವಂತೆ ತಿಳಿಸಿದರು. ಹೊಳೆಕರೆ ವಸತಿ ಪ್ರದೇಶದಲ್ಲಿ ವಾಸವಿರುವ ಕಾರ್ಮಿಕ ವರ್ಗದವರೊಂದಿಗೆ ಸಮಾಲೋಚನೆ ನಡೆಸಿದರು. ನದಿ ಪಾತ್ರದಲ್ಲಿ ವಾಸವಿರುವುದರಿಂದ ವಿಪತ್ತು ಎದುರಾದ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಿಗೆ ತಕ್ಷಣವೇ ತೆರಳಬೇಕು ಮತ್ತು ಅಧಿಕಾರಿಗಳಿಗೆ ಸೂಕ್ತ ಸ್ಪಂದನೆ ನೀಡಬೇಕು ಎಂದು ತಿಳಿಸಿದರು.

ಪಂಚಾಯತ್ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರಗಳನ್ನು ತೆರಯಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಕಾಳಜಿ ಕೇಂದ್ರದಲ್ಲಿ ಮೂಲ ಸೌಕರ್ಯ, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಲ್ಲದೆ ನಾಲೆ ಮತ್ತು ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯಲು ಅಗತ್ಯ ವ್ಯವಸ್ಥೆಗಳನ್ನು ಮಳೆಗಾಲ ಆರಂಭಕ್ಕೆ ಮುನ್ನವೇ ಸಿದ್ಧಪಡಿಸುವಂತೆ ತಿಳಿಸಿದರು. ನುರಿತ ಈಜುಪಟುಗಳು, ಮರಗಳು ರಸ್ತೆಗಳಿಗೆ ಉರುಳಿದಾಗ ಶೀಘ್ರವೇ ಅವುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಪರಿಕರಗಳನ್ನು ಸಿದ್ಧವಿರಿಸಿಕೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಜೊತೆಗೆ ಕೆಲ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!