NRIಗಳಿಂದ ವಿಚ್ಛೇದನ ಪಡೆದ ಭಾರತೀಯ ಮಹಿಳೆಯರಿಗೆ ಮಹಿಳಾ ಆಯೋಗ ನೆರವು 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರೀಯ ಮಹಿಳಾ ಆಯೋಗವು (NCW) ಎನ್‌ಆರ್‌ಐ ಪತಿಯಿಂದ ವಿಚ್ಛೇದನ ಪಡೆದು ದೂರವಾದ ಭಾರತೀಯ ಮಹಿಳೆಯರಿಗೆ ಒಂದೇ ವೇದಿಕೆಯಲ್ಲಿ ಪರಿಹಾರವನ್ನು ಒದಗಿಸಲು ತೀರ್ಮಾನಿಸಿದೆ. ಇದರ ಜೊತೆಗೆ ಅನಿವಾಸಿಗಳೊಂದಿಗೆ ವ್ಯವಹರಿಸುವಾಗ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಮತ್ತು ತಾಂತ್ರಿಕ ಸಮಸ್ಯೆಗಳ ಕುರಿತು, ಉದ್ದೇಶಪೂರ್ವಕವಾಗಿ ಸಂಬಂಧಪಟ್ಟ ಪಾಲುದಾರರನ್ನು ಒಟ್ಟುಗೂಡಿಸಿ ಸಮಾಲೋಚನಾ ಕಾರ್ಯಕ್ರಮವನ್ನು ಆಯೋಜಿಸಿದೆ.

ಎನ್‌ಆರ್‌ಐಗಳಿಂದ ವಿಚ್ಛೇದನ ಪಡೆದ ಮಹಿಳೆಯರಿಗೆ ʻಅಂತಾರಾಷ್ಟ್ರೀಯ ನ್ಯಾಯ ನೆರವುʼ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರಿಗೆ ನೆರವು ನೀಡಲು ಚಿಂತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ, ಎನ್‌ಜಿಒಗಳು ಮತ್ತು ಸಂಬಂಧಪಟ್ಟ ಕಾನೂನು ಜಾರಿ ಸಂಸ್ಥೆಗಳಾದ ಪೊಲೀಸ್, ಭಾರತೀಯ ರಾಯಭಾರಿಗಳು, ವಿದೇಶದಲ್ಲಿರುವ ಮಿಷನ್‌ಗಳು, ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗಳು,  ರಾಷ್ಟ್ರೀಯ/ರಾಜ್ಯ/ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ತಜ್ಞರಿಂದ NRI ಮದುವೆ ಪ್ರಕರಣಗಳಲ್ಲಿ ಮಹಿಳೆಯರು ಎದುರಿಸುವ ಕಾನೂನಿನ ತೊಡಕುಗಳು ಹಾಗೂ ನೈಜ ಸವಾಲುಗಳ ಬಗ್ಗೆ ಸಲಹೆಯನ್ನು ಪಡೆಯಲಾಗಿದೆ.

ಈ ಸಮಾಲೋಚನೆಯಲ್ಲಿ ಎನ್‌ಆರ್‌ಐ/ಪಿಐಒಗಳೊಂದಿಗೆ ವಿವಾಹವಾದ ಭಾರತೀಯ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಗುರುತಿಸುವಿಕೆ, ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಅಂತಾರಾಷ್ಟ್ರೀಯ ಕಾನೂನು ವ್ಯವಸ್ಥೆಯಲ್ಲಿನ ಸವಾಲುಗಳು ಎಂದು ಮೂರು ಸಮಸ್ಯೆಗಳಾಗಿ ವಿಂಗಡಿಸಿ ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ.

ಎನ್‌ಆರ್‌ಐ ಪ್ರಕರಣಗಳಲ್ಲಿ ತಜ್ಞರ ಸಲಹೆ 

  • ಎನ್‌ಆರ್‌ಐ ಪ್ರಕರಣಗಳಲ್ಲಿ ವ್ಯವಹರಿಸುವ ಏಜೆನ್ಸಿಗಳು/ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು
  • ರಾಯಭಾರ ಕಚೇರಿಗಳು ಸಂಕಷ್ಟದಲ್ಲಿರುವ ಮಹಿಳೆಯರ ವಿಷಯವನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳಲು, ಸಂತ್ರಸ್ತರಿಗಾಗಿ ರಾಷ್ಟ್ರೀಯ ಸಹಾಯವಾಣಿಯನ್ನು ಸ್ಥಾಪಿಸಬೇಕು ಜೊತೆಗೆ ವಿವಿಧ ಯೋಜನೆಗಳ ಮಾಹಿತಿ ನೀಡುವುದು
  • ವಿಚ್ಛೇದನ, ಮಕ್ಕಳ ಪಾಲನೆ ಪೋಷಣೆ ಮತ್ತು ಉತ್ತರಾಧಿಕಾರ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ವಿದೇಶಿ ದೇಶದ ನ್ಯಾಯಾಲಯವು ಅಂಗೀಕರಿಸಿದ ತೀರ್ಪು ನೊಂದ ಮಹಿಳೆಯರ ಮೇಲೆ ಬೀರುವ ಪರಿಣಾಮದ ಬಗ್ಗೆ ಸಮಾಲೋಚನೆ
  • ಅಂತಹ ಮಹಿಳೆಯರಿಗೆ ಪರಿಹಾರವನ್ನು ಒದಗಿಸುವ ಭಾರತೀಯ ಕಾನೂನು ವ್ಯವಸ್ಥೆಯ ಅಡಿಯಲ್ಲಿ ಅಸ್ತಿತ್ವದಲ್ಲಿರುವ ನಿಬಂಧನೆಗಳ ಚರ್ಚೆ
  • NCW ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕಾನೂನು ಕ್ರಮಗಳನ್ನು ಜಾರಿ ಮಾಡುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!