ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ಖ್ಯಾತ ಸಾಹಿತಿ ಎಸ್ ಎಲ್ ಬೈರಪ್ಪ ಗುರುವಾರ ಕರೆದ ಪತ್ರಿಕಾಗೋಷ್ಟಿ ಪ್ರಸ್ತುತ ಪಠ್ಯಪುಸ್ತಕ ಪರಾಮರ್ಶೆ ಕುರಿತ ವಾದ-ವಿವಾದಗಳ ಹಿನ್ನೆಲೆಯಲ್ಲಿ ಕುತೂಹಲ ಕೆರಳಿಸಿತ್ತು. ಪತ್ರಿಕಾಗೋಷ್ಟಿಯಲ್ಲಿ ಬೈರಪ್ಪನವರು ವಿವಾದದ ಬಗ್ಗೆ ತಮ್ಮ ನೇರ ಅಭಿಪ್ರಾಯವನ್ನೇನೂ ವ್ಯಕ್ತಪಡಿಸದೇ ಕೆಲವು ಕಳವಳಗಳನ್ನಷ್ಟೇ ಹಂಚಿಕೊಂಡರು. ಈ ವಿಷಯದಲ್ಲಿ ಸರ್ಕಾರಕ್ಕೆ ಯಾವುದೇ ಸಲಹೆ ನೀಡುವುದಕ್ಕೂ ಅವರು ನಿರಾಕರಿಸಿದರು.
ಆದರೆ ಬೈರಪ್ಪನವರ ಮಾತಿನ ಉದ್ದಕ್ಕೂ ಈಗ ಪಠ್ಯ ಪುಸ್ತಕದ ಹೆಸರಲ್ಲಿ ಕೆಲವು ಸಾಹಿತಿಗಳು ಎಬ್ಬಿಸಿರುವ ವಿವಾದದಲ್ಲಿ ಯಾವುದೇ ಹುರುಳಿಲ್ಲ, ಏಕೆಂದರೆ ಇವರು ಮೊದಲಿನಿಂದಲೂ ಇದೇ ದಾರಿಯನ್ನು ಅನುಸರಿಸಿಕೊಂಡುಬಂದಿದ್ದಾರೆ ಎಂಬ ಇಂಗಿತ ಸ್ಪಷ್ಟವಾಗಿತ್ತು. ಇದೇ ನಿಟ್ಟಿನಲ್ಲಿ ಅವರು ಪ್ರಶಸ್ತಿ ವಾಪ್ಸಿ ಹಾಗೂ ರಂಗಾಯಣ ನಿರ್ದೇಶಕರ ವಿರುದ್ಧದ ಅಭಿಯಾನಗಳನ್ನು ನೆನಪಿಸಿಕೊಂಡು ಅವನ್ನು ಟೀಕಿಸಿದರು. ಅವರ ಮಾತಿನ ಪ್ರಮುಖಾಂಶಗಳು ಹೀಗಿವೆ-
• ಪಠ್ಯವನ್ನು ಸತ್ಯದ ನೆಲೆಯಲ್ಲಿ ನೋಡಬೇಕೆ ಹೊರತು ಐಡಿಯಾಲಜಿ ಮುಂದಿಟ್ಟುಕೊಂಡು ಚರ್ಚೆ ಮಾಡಬಾರದು
• ಕಾವ್ಯ-ನಾಟಕ ಇರೋದು ರಸಾನುಭವಕ್ಕೆ. ಆದರೆ ಚಳವಳಿಗಾಗಿಯೇ ನಾಟಕ ಅನ್ನೋ ರೀತಿ ರಂಗಾಯಣದ ವಿಚಾರದಲ್ಲಿ ಕೆಲ ಸಾಹಿತಿಗಳು ಅಡ್ಡಂಡ ಕಾರಿಯಪ್ಪ ಅವರನ್ನು ಹಣಿಯಲು ನೋಡಿದರು. ಅದಾಗಲಿಲ್ಲ.
• ಟಿಪ್ಪು ಕ್ರೌರ್ಯ ದಾಖಲೆಬದ್ಧ ಸಂಗತಿ. ಟಿಪ್ಪುವಿನ ನಿಜ ಸ್ವರೂಪ ಎಂಬ ಪುಸ್ತಕವೇ ಬಂದಿದೆ
• ಈ ಹಿಂದೆ ಇಂದಿರಾ ಗಾಂಧಿ ಕಾಲದಲ್ಲಿ ಪಠ್ಯ ಪರಿಷ್ಕರಣೆ ಮಾಡುವಾಗ ಸತ್ಯ ಹೇಳಲು ಹೊರಟ ನನ್ನನ್ನು ಸಮಿತಿಯಿಂದ ಹೊರಗಿಟ್ಟರು. ಹೆಚ್ಚಿನ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಆ ಪಠ್ಯಗಳನ್ನೇ ಜಾರಿ ಮಾಡಿತು.
• ಮೋದಿ ಸರ್ಕಾರದಲ್ಲೂ ಸಾಹಿತಿಗಳು ಪ್ರಶಸ್ತಿ ವಾಪ್ಸಿ ಚಳವಳಿ ಶುರುಮಾಡಿದರು. ಅದರ ಜತೆ ತೆಗೆದುಕೊಂಡ ಹಣವನ್ನೂ ವಾಪಸ್ ಕೊಡಿ ಎಂದು ನಾನು ಸಲಹೆ ಕೊಟ್ಟಿದ್ದೆ.
• ಇವತ್ತಿನ ಪಠ್ಯ ಪುಸ್ತಕ ವಿಚಾರದಲ್ಲೂ ಗಲಾಟೆ ಮಾಡಿಸಿಯೇ ಮಾಡಿಸುತ್ತಾರೆ, ಇದು ನಿರೀಕ್ಷಿತವೇ.
• ಶಿಕ್ಷಣ ಸಚಿವರ ಮನೆಯನ್ನು ಸುಡಲು ಹೋದವರು ಯಾರೋ ಕೆಲ ಹುಡುಗರಲ್ಲ, ಇದರ ಹಿಂದೆ ಸಂಘಟಿತ ಶಕ್ತಿ ಇದೆ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ